ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನ ಅಳೇಗದ್ದೆಯ ಪುರಾತನ ಐತಿಹ್ಯವುಳ್ಳ ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಿತು. ಕಡಲನ್ನೇ ನಂಬಿ ಅಲೆಗಳಂತೆ ಅನಿಶ್ಚಿತ ಬದುಕಿ ನಲ್ಲಿಯೂ ನಿಶ್ಚಿತವಾದ ಜೀವನ ಕಟ್ಟಿಕೊಂಡ ಜನ ಜೀವನ ಈ ಊರಿನ ವೈಶಿಷ್ಟ್ಯ. ಇಲ್ಲಿ ನೆಲೆನಿಂತ ಶ್ರೀ ಮಹಾಗಣಪತಿ ಈ ಊರಿನ ಜನರ, ಮೀನುಗಾರರ ಆರಾಧ್ಯ ದೈವ.
ದೇವಸ್ಥಾನಕ್ಕೆ ಸರಿ ಸುಮಾರು ಒಂಬತ್ತು ಶತಮಾನಗಳ ಇತಿಹಾಸವಿದೆ. ಈ ಹಿಂದೆ ಎರಡು ಬಾರಿ ಜೀರ್ಣೋದ್ಧಾವಾಗಿದ್ದ ದೇವಸ್ಥಾನವು ಈ ಬಾರಿ ರಾಮಾ ಮೊಗವೀರ ಅವರ ನೇತೃದಲ್ಲಿನ ಜೀರ್ಣೋದ್ದಾರ ಸಮಿತಿಯವರು ಸಂಪೂರ್ಣ ಶಿಲಾಮಯ ದೇವಸ್ಥಾನ ನಿರ್ಮಿಸಿದ್ದಾರೆ.
ದೇವಾಲಯವು ಕಲೆ, ವಾಸ್ತುಶಿಲ್ಪ, ಕಾಷ್ಠಶಿಲ್ಪದ ಅಪರೂಪದ ಕೆತ್ತನೆಗಳನ್ನು ಹೊಂದಿದ್ದು ಅತ್ಯಂತ ಸುಂದರಾಗಿ ಮೂಡಿ ಬಂದಿದೆ.
ಶ್ರೀ ದೇವರ ಮೂಲ ವಿಗ್ರಹವನ್ನು ಜಿಲ್ಲೆಯ ಇಡ ಗುಂಜಿಯ ಶಿಲ್ಪಿ ಗಣೇಶ ಭಟ್ಟಕೆತ್ತನೆ ಮಾಡಿಕೊಟ್ಟಿದ್ದಾರೆ. ಅಯೋಧ್ಯೆಯ ಶ್ರೀ ರಾಮನ ಮೂರ್ತಿ ಕೆತ್ತನೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಶಿಲ್ಪಿಗಳಿಂದ ಅತ್ಯಂತ ಶಾಸ್ತ್ರ ಸಮ್ಮತವಾಗಿ ಕೆತ್ತಲ್ಪಟ್ಟ ಶ್ರೀ ಮಹಾಗಣಪತಿ ಮೂರ್ತಿಯು ಅತ್ಯಂತ ಸುಂದರವಾಗಿದೆ. ಶ್ರೀ ದೇವರ ಮೂರ್ತಿಯು ಸುಮಾರು 30 ಇಂಚು ಎತ್ತರದ ಕೃಷ್ಣ ಶಿಲೆಯಲ್ಲಿ ನಿರ್ಮಾಣ ಮಾಡಿದ ಏಕಶಿಲಾ ಮೂರ್ತಿಯಾಗಿದೆ. ಚತುರ್ಭುಜನಾದ ಮಹಾಗಣಪತಿಯು ಅಂಕುಶ, ಪಾಶ ಸಹಿತನಾಗಿ ಸ್ವದಂತ ಯುಕ್ತನಾಗಿ ಅಭಯ | ಸಹಿತ ಮತ್ತು ಮೋದಕ ಪ್ರಿಯನಾಗಿ ಲಲಿತಾಸನದಲ್ಲಿ
ಪದ್ಯದ ಮೇಲೆ ಕುಳಿತಂತಿರುವ ಸುಂದರ ಭಂಗಿಯಲ್ಲಿದೆ. ಉದರದಲ್ಲಿ ನಾಗಬಂಧ, ಕೀರ್ತಿ ಮುಖವುಳ್ಳ ಮತ್ತು ಸೂಕ್ಷ್ಮ ಕೆತ್ತನೆಯುಳ್ಳ ಪ್ರಭಾವಳಿ, ಪೀಠದಲ್ಲಿ ಮೂಷಿಕನನ್ನು ಕೆತ್ತಲಾಗಿದ್ದು ಭಾರತೀಯ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ಉತ್ತಮ ಪಂಚತಾಳದ 64 ಅಂಗುಲ ಪ್ರಮಾಣದಲ್ಲಿ ಹೊಂದಿದ್ದು, 11 ಇಂಚು ಎತ್ತರವುಳ್ಳ ಪಾಣಿ ಪೀಠದ ಮೇಲೆ ಶ್ರೀ ಮಹಾಗಣಪತಿಯು ವಿರಾಜಮಾನನಾಗಿದ್ದಾನೆ.
ಗಣಪತಿ ದೇವಾಲಯಗಳಲ್ಲಿ ಪಶ್ಚಿಮಾಭೀಮುಖವಾಗಿರುವ ಗಣಪತಿ ದೇವಸ್ಥಾನಗಳು ಬಹಳ ವಿರಳವಾಗಿದೆ. ಅಳೇಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನವು ಪಶ್ಚಿಮಾಭಿಮುಖವಾಗಿರುವುದು ಅತ್ಯಂತ ಶ್ರೇಷ್ಠವಾಗಿದೆ.ಈ ದೇವಸ್ಥಾನದ ಶ್ರೀ ಮಹಾಗಣಪತಿಯ ನೂತನ ಬಿಂಭ ರಚನಾ ಕಾರ್ಯ ನನಗೆ ದೊರಕಿದ್ದು ಶಾಸ್ತ್ರ ಸಮ್ಮತವಾಗಿ ಮೂರ್ತಿಯನ್ನು ತಯಾರಿಸಿದ್ದೇನೆ ಎಂದು ಶಿಲ್ಪಿ ಇಡಗುಂಜಿ ಗಣೇಶ ಭಟ್ಟ ಹೇಳಿದ್ದಾರೆ.
