ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ದೇವಸ್ಥಾನ
ಗಳು ಸಮಾಜವನ್ನು ಜಾಗೃತಿಗೊಳಿಸಿ, ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿವೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಶನಿವಾರ ಸಂಜೆ ಆನಗೋಡ ಗೋಪಾಲಕೃಷ್ಣ ದೇವಾಲಯದ ಅಷ್ಟಬಂಧ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಧರ್ಮ ಶಿಕ್ಷಣವೂ ದೇವಸ್ಥಾನಗಳಲ್ಲಿ ನಡೆಯಬೇಕು. ಪೂರ್ವಜರ ಸಂಕಲ್ಪವೂ ಇದೇ ಆಗಿದೆ. ಮಂದಿರಗಳ ಪುನರಾತ್ಮಾನಗಳೊಂದಿಗೆ ಭಾರತ ಮರು ನಿರ್ಮಾಣಗೊಂಡಿದೆ. ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷಗಳ ಹೋರಾಟ ಮಾಡಿದರು. ಆದರೆ ಮಾಡಬೇಕೆನ್ನುವ ನಿಜವಾದ ಕಳಕಳಿ ಬಂದಾಗ ಮಂದಿರ ನಿರ್ಮಾಣವಾಗಿದೆ. ನಮ್ಮ ಹಿರಿಯರು ಕಂಡಂತಹ ಕನಸನ್ನು ನನಸುಗೊಳಿಸುತ್ತ ನಮ್ಮ ಸಮಾಜದ ಮೇಲಾಗುವ ಪ್ರಹಾರ ತಡೆಯುವದಕ್ಕೆ ನಾವೆಲ್ಲ ಸಿದ್ದರಾಗಬೇಕಿದೆ. ನಮ್ಮ ಬದುಕನ್ನು ಮೊಬೈಲ್‌ಗಳು ಕಿತ್ತುಕೊಳ್ಳುತ್ತಿದೆ. ಈ ಮಾಯಾಜಾಲದಲ್ಲಿ ಮಕ್ಕಳು ಸಿಲುಕಿ ಬದುಕನ್ನು ತಿರುಚಿ ಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಬೇಕಾಗಿದೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ
ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ,ವಿದ್ವಾನ್ ಗಣಪತಿ ರಾ. ಭಟ್ಟ, ಸತೀಶ ಯಲ್ಲಾಪುರ, ಗಿರೀಶ ಭಟ್ಟ ಅಗ್ಗಾಶಿಮನೆ, ಅರ್ಚಕ ಗೋಪಾಲಕೃಷ್ಣ ಭಟ್ಟ ಮತ್ತು ಮಹಾದೇವಿ ಭಟ್ಟ ಇವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣಪತಿ ಮಾನಿಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಪಾಲಕೃಷ್ಣ ದೇವಾಲಯ ನಿರ್ಮಾಣ ಕೈಂಕರ್ಯದಲ್ಲಿ ಸಹಕರಿಸಿದವರನ್ನು ಸ್ಮರಿಸಿದರು.

ಸಹನಾ ಮಾನಿಗದ್ದೆ ಪ್ರಾರ್ಥಿಸಿದರು. ಗಣೇಶ ಹೆಗಡೆ ನೆರ್ಲೆಮನೆ ಸ್ವಾಗತಿಸಿದರು. ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಯಲ್ಲಾಪುರ ನಿರ್ವಹಿಸಿದರು. ದೇವಸ್ಥಾನ ಕಾರ್ಯದರ್ಶಿ ನರಸಿಂಹ ವಡಗಿರಿಪಾಲ್ ವಂದಿಸಿದರು.