ಸುದ್ದಿ ಕನ್ನಡ ವಾರ್ತೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸವು ತ್ಯಾಗ, ಬಲಿದಾನ ಮತ್ತು ದೇಶಭಕ್ತಿಯಿಂದ ತುಂಬಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಮಹನೀಯರು ತಮ್ಮ ಜೀವನವನ್ನೇ ದೇಶದ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿ, ಭಾರತವನ್ನು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಭಾರತದ ಸಂಸ್ಕೃತಿ ಬಹುಮುಖವಾಗಿದ್ದು, ವಿವಿಧ ಧರ್ಮ, ಭಾಷೆ, ಸಂಪ್ರದಾಯಗಳು ಒಂದೇ ರಾಷ್ಟ್ರದೊಳಗೆ ಶಾಂತಿಯುತವಾಗಿ ಸಹಬಾಳ್ವೆ ಸಾಮರಸ್ಯದಿಂದ ನಡೆಸುವ ಪರಂಪರೆಯನ್ನು ಹೊಂದಿದೆ. ‘ಸರ್ವರಿಗೂ ಸಮಪಾಲು ಸಮಬಾಳು’ ಎನ್ನುವ ತತ್ವಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ಬುದ್ಧ, ಬಸವ ಅವರ ತತ್ವಗಳನ್ನುಅಳವಡಿಸಿಕೊಂಡಿದೆ ಎಂದು ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿನ್ನೆಲೆಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆಯನ್ನು ನಾವು ವಿಶಾಲ ಮತ್ತು ಸಮತೋಲನದ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಅವರ ಉದ್ದೇಶ ಸಮಾಜದಲ್ಲಿ ದ್ವೇಷ ಅಥವಾ ವೈಮನಸ್ಸನ್ನು ಉಂಟುಮಾಡುವುದಲ್ಲ ಎಂಬುದು ಸ್ಪಷ್ಟವಾಗಿದೆ.ಈ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷದವರು ಅನವಶ್ಯಕವಾಗಿ ವಿವಾದಾತ್ಮಕವಾಗಿಸಲು ಯತ್ನಿಸುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ದೇಶಪಾಂಡೆ ಹೇಳಿದ್ದಾರೆ.

ಆದ್ದರಿಂದ, ದೇಶದ ಏಕತೆ, ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಹಾಗೂ ನಾಗರಿಕರ ಜವಾಬ್ದಾರಿ ಎಂದು ನಾನು ಬಲವಾಗಿ ನಂಬಿದ್ದೇನೆ. ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಂವಾದದ ಮೂಲಕ ನಾವು ಇನ್ನಷ್ಟು ಬಲವಾದ ಮತ್ತು ಸಮಗ್ರ ಭಾರತವನ್ನು ನಿರ್ಮಿಸೋಣ ಎಂದು ಆರ್ ವಿ ದೇಶಪಾಂಡೆ ನುಡಿದಿದ್ದಾರೆ.