Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಪಟ್ಟಣದಲ್ಲಿ ಯುವಜನತೆಯನ್ನು ಮಾದಕ ವ್ಯಸನದ ಸುಳಿಗೆ ಸಿಲುಕದಂತೆ ತಡೆಯಲು ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿಂದು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಯಲ್ಲಾಪುರ ಪೊಲೀಸ್‌ ಠಾಣೆಯ ಸಂಯುಕ್ತ ಆಶ್ರಯದಲ್ಲಿ NDPS (ಮಾದಕ ದ್ರವ್ಯ ವಿರೋಧಿ) ಜಾಗೃತಿ ಅಭಿಯಾನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

Banner Ad

ಅಭಿಯಾನದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಗೃತಿ ರ್ಯಾಲಿ ನಡೆಸಿ, ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಂತರ ನಡೆದ ಜಾಗೃತಿ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಗಣ್ಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಕಾನೂನು ಸಂಕಷ್ಟಗಳು ಹಾಗೂ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಾದಕ ವ್ಯಸನವು ಒಂದು ಸಂಸಾರವನ್ನು ಹೇಗೆ ನಾಶಪಡಿಸುತ್ತದೆ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು ಪ್ರದರ್ಶಿಸಿದ ಅರ್ಥಪೂರ್ಣ ಬೀದಿ ನಾಟಕ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ “ನಾನು ಯಾವುದೇ ಮಾದಕ ದ್ರವ್ಯಗಳಿಗೆ ಬಲಿಯಾಗುವುದಿಲ್ಲ ಮತ್ತು ನನ್ನ ಆಸುಪಾಸಿನವರು ಈ ಚಟಕ್ಕೆ ಬೀಳದಂತೆ ಜಾಗೃತಿ ಮೂಡಿಸುತ್ತೇನೆ” ಎಂದು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಅಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು, ಮಾತೃಭೂಮಿ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Banner Ad