Banner Ad

ಸುದ್ದಿ ಕನ್ನಡ ವಾರ್ತೆ
ಭಟ್ಕಳ: ತಾಲೂಕಿನ ಜಾಲಿ ತಲಗೇರಿಯ ವಿವೇಕಾನಂದ ನಗರದಲ್ಲಿ ಗೋ ಕಳ್ಳರ ತಂಡವನ್ನು ಓಡಿಸಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಮಧ್ಯ ರಾತ್ರಿ ಸುಮಾರು 3:45ರ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಸ್ಥಳೀಯರು ಅನುಮಾನಗೊಂಡು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದು, ವಾಹನದಲ್ಲಿದ್ದ ಮೊಬೈಲ್ ಫೋನ್ ಸಿಕ್ಕಿದೆ. ಘಟನೆಯ ನಂತರ
ಆರೋಪಿಗಳು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿ, ಮತ್ತೊಂದು ತಂಡವನ್ನು ಕರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಬಳಿಕ ಕರಿಕಲ್ ರಸ್ತೆಯ ಖಾಸಗಿ ಬ್ಯಾಂಕ್ ಹಿಂಭಾಗದಲ್ಲಿ ಅವಿತುಕೊಂಡಿದ್ದ ಆರೋಪಿಗಳನ್ನು ಹಿಡಿಯಲು ಪೊಲೀಸರು ಹಾಗೂ ಗ್ರಾಮಸ್ಥರು ಮುಂದಾದಾಗ, ಬೈಕ್ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ.

Banner Ad

ಆರೋಪಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ಗುರುತು ಮರೆ ಮಾಚಲು ಯತ್ನಿಸಿರುವುದು ಸಹ ಬೆಳಕಿಗೆ ಬಂದಿದೆ.ಇದಲ್ಲದೆ, ಆರೋಪಿಗಳು ಚೂರಿ ಸಹಿತ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ದಿನನಿತ್ಯ ಸಾಕಿ ಪೋಷಿಸುತ್ತಿರುವ ಗೋವುಗಳನ್ನು ಕಳವು ಮಾಡಲು ಯತ್ನಿಸಿರುವುದು ಆತಂಕಕಾರಿಯಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Banner Ad