ಸುದ್ದಿ ಕನ್ನಡ ವಾರ್ತೆ

ಬೆಂಗಳೂರು: ಸಿಲಿಕಾನ್ ಸಿಟಿಯ ಚಂದ್ರಾಲೇಔಟ್ ನ ಭೈರವೇಶ್ವರ ನಗರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 11 ತಿಂಗಳ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ್ದು, ಮಗುವಿನ ಸಾವಿನಿಂದ ಮರುಗಿದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಮೃತ ತಾಯಿಯನ್ನು ಪ್ರತಿಭಾ (29) ಎಂದು ಗುರುತಿಸಲಾಗಿದೆ. ಇವರು ಮತ್ತು ಪತಿ ಮಹಾಂತೇಶ್ ಇಬ್ಬರೂ ಸಾಫ್ಟ್‌ವೇ‌ರ್ ಉದ್ಯೋಗಿಗಳಾಗಿದ್ದರು. ಮಗು ಅಗಸ್ಯ (11 ತಿಂಗಳು) ಮನೆಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಪ್ರತಿಭಾ ಮತ್ತು ಮಗು ಮಾತ್ರ ಇದ್ದರು.ಪತಿ ಮಹಾಂತೇಶ್ ಕೆಲಸದ ನಿಮಿತ್ತ ಹೊರಹೋಗಿದ್ದರು.

ಪ್ರತಿಭಾ ಅವರು ಟೇರಸ್ ಮೇಲಿನ ಒಣಗಿದ ಬಟ್ಟೆಗಳನ್ನು ತರಲು ಹೋದ ಸಂದರ್ಭದಲ್ಲಿ, ಮಗು ಅಗಸ್ಯ ತೆವಳುತ್ತಾ ಬಾತ್‌ರೂಮ್‌ಗೆ ಹೋಗಿದೆ.
ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮಗು ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದೆ.ಬಟ್ಟೆ ತರಲು ಹೋಗಿ ವಾಪಸ್ ಬಂದ ತಾಯಿಗೆ ಮಗು ನೀರಿನ ಬಕೆಟ್‌ನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ಹೊರತೆಗೆದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ತನ್ನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂಬ ತೀವ್ರ ಅಪರಾಧ ಪ್ರಜ್ಞೆ ಮತ್ತು ಮಗುವಿನ ವಿಯೋಗ ತಾಳಲಾರದೆ ಪ್ರತಿಭಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆದಿದೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಮೊದಲಿಗೆ ಮಾತ್ರೆ ನುಂಗಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.