Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿ.ಎಂ.ಎಸ್. ಉಳಿಸುವ ಹೋರಾಟಕ್ಕೆ ಸಂಸದರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರು ಸಂಸ್ಥೆಯ ಹಿತ ಕಾಯುವ ಬದಲು ರೈತ ವಿರೋಧಿ ನಿರ್ಧಾರಗಳಿಗೆ ಅಧಿಕಾರಿಗಳೊಂದಿಗೆ ಕೈಜೋಡಿಸಿರುವುದು ವಿಪರ್ಯಾಸ ಎಂದು ಗಂಭೀರ ಆರೋಪ ಮಾಡಲಾಗಿದೆ.

ಸಹಕಾರಿ ಕ್ಷೇತ್ರದಲ್ಲಿ ಎನ್.ಕೆ. ಭಟ್ಟ ಅವರ ಆಡಳಿತವು ಹೊಸ ಸಂಚಲನ ಮೂಡಿಸಿದೆ. ಅವರ ಛಲ, ಬದ್ಧತೆ ಮತ್ತು ಜವಾಬ್ದಾರಿಯುತ ನಾಯಕತ್ವವು ಸಂಸ್ಥೆಯನ್ನು ರಾಜಕೀಯ ಹಸ್ತಕ್ಷೇಪದ ನಡುವೆಯೂ ಯಶಸ್ವಿಯಾಗಿ ಮುನ್ನಡೆಸಿದೆ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಸ್ವರ್ಣವಲ್ಲೀ ಶ್ರೀಗಳ ಆದೇಶದಂತೆ ನಾರಾಯಣ ಭಟ್ಟ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಬೇಕು ಎಂಬ ಮನವಿಗೆ ಸ್ಪಂದಿಸಿ, ಸತ್ಯಾಗ್ರಹ ಅಂತ್ಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರು, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಹೋರಾಟ ಮುಂದುವರಿಯಲಿದೆ. ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

Banner Ad

ಉಪವಾಸ ಸತ್ಯಾಗ್ರಹ ಕೈಬಿಟ್ಟ ನಂತರ ಮಾತನಾಡಿದ ಎನ್.ಕೆ. ಭಟ್ಟ ಅವರು, ಆಡಳಿತಾಧಿಕಾರಿಗಳು ಸಂಸ್ಥೆಯ ಕಾನೂನಿಗೆ ವಿರುದ್ಧವಾಗಿ ಠರಾವುಗಳನ್ನು ಸಿದ್ಧಪಡಿಸುತ್ತಿರುವುದರ ಹಿಂದೆ ಸ್ಥಳೀಯ ಶಾಸಕ ಸಿ.ಎಸ್. ಹೆಬ್ಬಾರ್ ಅವರ ಕೈವಾಡವಿದೆ ಎಂದು ನೇರ ವಾಗ್ದಾಳಿ ನಡೆಸಿದರು. ನಾನು ಸಂಸ್ಥೆಯ ಅಧ್ಯಕ್ಷನಾಗಿ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಯ ಹಣವನ್ನಾಗಲಿ ಅಥವಾ ಯಾವುದೇ ಸೌಲಭ್ಯವನ್ನಾಗಲಿ ಬಳಸಿಕೊಂಡಿಲ್ಲ. ಬದಲಾಗಿ, ಸಂಸ್ಥೆಯ ಹಿತದೃಷ್ಟಿಯಿಂದ 10 ಗುಂಟೆ ಜಾಗವನ್ನು ಸಂಘದ ಹೆಸರಿಗೆ ಮಾಡಿಸಿದ್ದೇನೆ. ರೈತರ ಹಿತ ಕಾಯುವುದೇ ನನ್ನ ಏಕೈಕ ಗುರಿ ಎಂದರು.
ಮುಂದುವರಿದು ಮಾತನಾಡಿದ ಅವರು, ನನಗೆ ಅಧ್ಯಕ್ಷ ಸ್ಥಾನದ ಮೇಲೆ ಆಸೆಯಿಲ್ಲ, ರೈತರು ಸೂಚಿಸಿದರೆ ಕ್ಷಣಾರ್ಧದಲ್ಲಿ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ. ಶಾಸಕರು ನೀಡಿದ ಹತ್ತಾರು ಅಡೆತಡೆಗಳ ನಡುವೆಯೂ ಸಂಸ್ಥೆಯು50 ಕೋಟಿ ರೂಪಾಯಿ ಲಾಭ ಗಳಿಸಿದೆ. ನಾನು ಎಂದಿಗೂ ರೈತರ ಪರ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವೆಂಕಟ್ರಮಣ ಬೆಳ್ಳಿಯವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

Banner Ad