ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ಅಘನಾಶಿ ನದಿ ತಿರುವು ಯೋಜನೆಗೆ ಎಷ್ಟೇ ವಿರೋಧ ವ್ಯಕ್ತವಾಗುತ್ತಿದ್ದರೂ ಕೂಡ ಅತ್ತ ಸರ್ಕಾರವು ಸದ್ದಿಲ್ಲದೆಯೇ ಈ ಯೋಜನೆ ಜಾರಿಗೆ ಎಲ್ಲ ಸಿದ್ದತೆ ನಡೆಸುತ್ತಲೇ ಇದೆ. ಈ ನಿಟ್ಟಿನಲ್ಲಿ ಸಭೆಗಳ ಮೇಲೆ ಸಭೆ ನಡೆಯುತ್ತಲೇ ಇದೆ. ಜಿಲ್ಲೆಯಾದ್ಯಂತ ವಿವಿಧಡೆ ಪ್ರತಿದಿನ ವಿಮಾನ ಹಾರಾಟವಂತು ಮುಂದುವರಿದಿದೆ. ಇದು ಖನಿಜ ಸಂಪತ್ತಿನ ವೈಮಾನಿಕ ಸಮೀಕ್ಷೆಯೋ ಅಥವಾ ನದಿ ತಿರುವು ಯೋಜನೆಯ ವೈಮಾನಿಕ ಸಮೀಕ್ಷೆಯೋ… ಎಂಬುದು ಹೆಚ್ಚಿನ ಅನುಮಾನಕ್ಕೂ ಕಾರಣವಾಗಿದೆ.

ಮಂಗಳವಾರ ಹಳವಳ್ಳಿ, ಹೆಗ್ಗಾರ್, ಕಕ್ಕರ್, ಮಾಗೋಡು, ಮತ್ತಿಘಟ್ಟ, ಭಾಗದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸಿದೆ. ಈಗ ಪ್ರಮುಖವಾಗಿ ವೈಮಾನಿಕ ಸಮೀಕ್ಷೆಯ ಸಂದರ್ಭದಲ್ಲಿ ವಿಮಾನ ಓಡಾಟ ನಡೆಸಿದ ಹೆಜ್ಜೆ ಗುರುತು ಪತ್ತೆ ಮಾಡಬಾರದೆಂದು ಆಗಾಗ ತನ್ನ ರಡಾರ್ ಯಂತ್ರವನ್ನು ಬಂದ್ ಮಾಡಿ ವಿಮಾನ ಹಾರಾಟ ನಡೆಸಿ ಸಮೀಕ್ಷೆ ಮಾಡಲಾಗುತ್ತಿದೆ. ಈ ರೀತಿ ಮಾಡಿ ಜನರಿಗೆ ಟ್ರ್ಯಾಕ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಟ್ರ್ಯಾಕ್ ಮಾಡಿದರೆ ಈ ಯೋಜನೆಗೆ ಜನರ ವಿರೋಧ ಹೆಚ್ಚಾಗಲಿದೆ ಎಂಬ ದೃಷ್ಟಿಯಿಂದ ರಡಾರ್ ಬಂದ್ ಮಾಡಿ ಈ ರೀತಿ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಲ್ಲಿ ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನವೆಂಬರ್ ಮೂರರಂದು ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಗಿತ್ತು. ಈ ಯೋಜನೆ ಸ್ಥಗಿತಗೊಳಿಸಲು ಜಿಲ್ಲೆಯ ಜನಪ್ರತಿನಿಧಿಗಳಿಗೆ 15 ದಿನಗಳ ಅವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಜಿಲ್ಲೆಯ ಜನಪ್ರತಿನಿಧಿಗಳ ಯಾವುದೇ ಪ್ರಯತ್ನ ನಡೆದಂತೆ ಕಂಡುಬರುತ್ತಿಲ್ಲ.

ಯಾವುದೇ ಯೋಜನೆ ಅಥವಾ ಕೆಲಸ ಇಲ್ಲದೆ ಪ್ರತಿದಿನ ಈ ರೀತಿ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸಿ ವೈಮಾಲಿಕ ಸಮೀಕ್ಷೆ ನಡೆಸಲು ಸಾಧ್ಯವೇ ಇಲ್ಲ. ಈ ಯೋಜನೆ ಇಲ್ಲದಿದ್ದರೆ ಮತ್ತೊಂದು ಯೋಜನೆಗಂತೂ ಸರ್ಕಾರ ಸ್ಕೆಚ್ ಹಾಕಿ ಸಮೀಕ್ಷೆಗೆ ಮುಂದಾಗಿರಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.

ಒಟ್ಟಾರೆ ಈ ವೈಮಾನಿಕ ಸಮೀಕ್ಷೆ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿರುವುದು ನಿಜ.

 

ಜನಪ್ರತಿನಿಧಿಗಳು ಹೀಗೂ ಮಾಡಬಹುದು..

ಜನಪ್ರತಿನಿಧಿಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಾಗದ ಕಾರಣ ಅವರೆಲ್ಲರೂ ಸೇರಿ ಪಕ್ಷಭೇದ ಮರೆತು ಒಟ್ಟಾಗಿ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬಹುದು.

ಹೀಗೆ ಮಾಡಿದರೆ ನಮ್ಮ ಜಿಲ್ಲೆಯ ಜನರ ಹೋರಾಟದ ಬೆಂಬಲಕ್ಕೆ ನಿಂತಂತೆ ಆಗುತ್ತದೆ. ತಮ್ಮ ಕೈಯಿಂದ ಈ ಯೋಜನೆ ಸ್ಥಗಿತಗೊಳಿಸಲು ಸಾಧ್ಯವಾಗದ ಕಾರಣ ಈ ರೀತಿ ರಾಜೀನಾಮೆ ನೀಡುವುದರಿಂದಲೂ  ಈ ಜನ ವಿರೋಧಿ ಯೋಜನೆಗೆ ತಮ್ಮ ವಿರೋಧವನ್ನು ಅವರು ನೇರವಾಗಿ ವ್ಯಕ್ತಪಡಿಸಬಹುದು ಅಲ್ಲವೇ…?