ಬೆಂಗಳೂರು/ ಯಲ್ಲಾಪುರ :
ಬೆಂಗಳೂರಿನ ಫ್ರೀಡಂ-ಪಾರ್ಕಿನಲ್ಲಿ ಪ್ರಸ್ತಾವಿತ “ಬೇಡ್ತಿ(ಗಂಗಾವಳಿ)- ವರದಾ”
ಹಾಗೂ “ಅಘನಾಶಿನಿ-ವೇದಾವತಿ” ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಶನಿವಾರ ಸಂಘಟಿಸಿದ ಬೃಹತ್
ಸಾರ್ವಜನಿಕ ಧರಣಿಯಲ್ಲಿ ಕೈಗೊಂಡ ನಿರ್ಣಯಗಳು.
೧) ದಕ್ಷಿಣ ಭಾರತದ ಆಹಾರ ಸುರಕ್ಷತೆಯ ತಾಣ ಸಹ್ಯಾದ್ರಿ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ೨೨ ಪ್ರಮುಖ ನದೀ
ಕಣಿವೆಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಸುಸ್ಥಿರ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ
ಮಾಡಲಾಗಿದೆ.
೨) ಪಶ್ಚಿಮ ಘಟ್ಟದ ಹೃದಯ ಭಾಗವಾದ ಬೇಡ್ತಿ & ಅಘನಾಶಿನಿ ನದೀ ಕಣಿವೆಗಳಲ್ಲಿ ೪ ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಿ
ನೀರನ್ನು ಬೇರೆಡೆ ಸಾಗಿಸುವ ವಿನಾಶಕಾರಿ ಯೊಜನೆಗಳು ಕಣಿವೆಗಳ ರೈತರು, ಮೀನುಗಾರರು, ವನವಾಸಿಗಳು, ಸೇರಿ
ಲಕ್ಷಾಂತರ ಜನರಬದುಕು ನಾಶಮಾಡಲಿದೆ ಎಂಬುದನ್ನು ಧರಣಿ, ಸಮಾವೇಶ ಎತ್ತಿ ಹೇಳಿದೆ.
೩) ಎತ್ತಿನ ಹೊಳೆಯ ವಿಫಲ ನದೀ ತಿರುವು ಯೋಜನೆಯಂತೆ ಬೇಡ್ತಿ ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ
ಯೋಜನೆಗಳು ವ್ಯರ್ಥ, ನೀರಿಲ್ಲದ ನೀರಾವರಿ ಯೋಜನೆಗಳಾಗಲಿವೆ ಎಂದು ರಾಜ್ಯಮಟ್ಟದ ಧರಣಿ ಎಚ್ಚರಿಕೆ ನೀಡಿದೆ.
೪) ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ನದಿಗಳನ್ನು ತಿರುಗಿಸುವ ಹುಚ್ಚು ಸಾಹಸ ನಡೆಸಿದರೆ ಬೇಡ್ತಿ ಅಘನಾಶಿನಿ ಜೀವ
ನದಿಗಳು ಸಾಯುತ್ತವೆ. ಎಂಬ ಗಂಭೀರ ಎಚ್ಚರಿಕೆಯನ್ನು ಧರಣಿ ಸಮಾವೇಶದಲ್ಲಿ ವಿಜ್ಞಾನಿಗಳು ನೀಡಿದ್ದಾರೆ.
೫) ಪಶ್ಚಿಮ ಘಟ್ಟ ಈಗಾಗಲೇ ಭೂಕುಸಿತದ ಭಾರಿ ಅಪಾಯಗಳಿಗೆ ಸಿಲುಕಿದೆ. ಬೇಡ್ತಿ ಅಘನಾಶಿನಿ ಕಣಿವೆಗಳು
ಭೂಕುಸಿತ ಸೂಕ್ಷö್ಮ ವಲಯದಲ್ಲಿವೆ. ಇಲ್ಲಿ ನದೀ ಜೋಡಣೆಯಂಥ ಬೃಹತ್ ಯೋಜನೆ ಖಂಡಿತ ಸಾಧು ಅಲ್ಲ ಎಂದು
ಧರಣಿ ನಿರತ ಸಾವಿರಾರು ಜನ ಒಕ್ಕೊರಲ ಅಭಿಪ್ರಾಯ ನೀಡಿದ್ದಾರೆ.
೬) ಕರಾವಳಿ ಪ್ರದೇಶವಾದ ಕುಮಟಾ ಅಂಕೋಲಾ ಪ್ರದೇಶದಲ್ಲಿ ನದೀ ತಿರುವು ಯೋಜನೆ ಜಾರಿಯಾದರೆ ಉಪ್ಪು
ನೀರು ಒಳನುಗ್ಗಲಿದೆ. ಮೀನುಗಾರಿಕೆ, ಕೃಷಿ ಬದುಕು ನಾಶವಾಗಲಿದೆ ಎಂದು ಧರಣಿ ಪ್ರತಿಭಟನೆಯಲ್ಲಿ ಆಕ್ರೋಶ
ವ್ಯಕ್ತವಾಗಿದೆ.
೭) ಲಕ್ಷಾಂತರ ಗಿಡಮರ ನಾಶದಿಂದ ಬೃಹತ್ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಮಾನವ ವನ್ಯ ಜೀವಿ ಸಂಘರ್ಷ
ಹೆಚ್ಚಲು ಕಾರಣವಾಗುತ್ತವೆ, ಅಮೂಲ್ಯ ಸಸ್ಯ – ವನ್ಯ ಸಂಪತ್ತು ಕಣ್ಮರೆ ಆಗಲಿದೆ ಎಂದು ಧರಣಿಯಲ್ಲಿ ಪಾಲ್ಗೊಂಡ
ಮಣ್ಣಿನ ಮಕ್ಕಳು ಜಾಗೃತಿಯ ಗಂಟೆ ಬಾರಿಸಿದ್ದಾರೆ.
೮) ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳನ್ನು ವನ್ಯ ಜೀವಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ವನ್ಯ
ಜೀವಿ ಇಲಾಖೆ ೨೦೧೨ ರಲ್ಲಿ ಘೋಷಿಸಿದೆ. ಎಂಬುದನ್ನು ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಕೈಗೊಂಡ ಉತ್ತರ
ಕನ್ನಡ ಜಿಲ್ಲೆ ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನ ಬೃಹತ್ ಯೋಜನೆಗಳಿಗೆ ಉ.ಕ ದಲ್ಲಿ ಅವಕಾಶ ಸಲ್ಲದು
ಎಂದು ವರದಿ ನೀಡಿದೆ.
೯) ಮಲೆನಾಡಿಗೇ ಸುಸ್ಥಿರ ನೀರಾವರಿ ಯೋಜನೆ ಇಲ್ಲ. ಉ.ಕ ಜಿಲ್ಲೆಯ ರೈತರಿಗೆ ಸುಸ್ಥಿರ ನೀರಾವರಿ ಯೋಜನೆಯನ್ನು
ವಿನಾಶರಹಿತವಾಗಿ ಸರ್ಕಾರ ರೂಪಿಸಬೇಕು ಎಂಬ ಬೇಡಿಕೆ ಮಂಡಿಸಲಗಿದೆ.
೧೦)ವಿಜ್ಞಾನಿಗಳು, ಸ್ಥಳೀಯ ೧೨೦ ಗ್ರಾಮ ಪಂಚಾಯತಗಳು, ೧೬೦ ಗ್ರಾಮೀಣ ಸಹಕಾರ ಸಂಘಗಳು, ಉ.ಕ ಜಿಲ್ಲಾ
ಕೆ.ಡಿ.ಪಿ ಸಭೆ, ಎಲ್ಲ ಧಾರ್ಮಿಕ ಮುಖಂಡರು, ಬೇಡ್ತಿ & ಅಘನಾಶಿನಿ ನದೀತಿರುವು ಯೋಜನೆಗಳನ್ನು ಕೇಂದ್ರ, ರಾಜ್ಯ
ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಸಂಗತಿಯನ್ನು ಧರಣಿಯಲ್ಲಿ ಎತ್ತಿ ಹೇಳಲಾಗಿದೆ.
೧೧) ಬೇಡ್ತಿ ವರದಾ ಹಾಗೂ ಅಘನಾಶಿನಿ ವೇದಾವತಿ ನದೀ ತಿರುವು ಯೋಜನೆ ಕೈಬಿಡಬೇಕು, ಬೇಡ್ತಿ ವರದಾ
ಡಿ.ಪಿ.ಆರ್. ಕೆಲಸ ಸ್ಥಗಿತಗೊಳಿಸಬೇಕು ಎಂದು ಅಕ್ಟೋಬರ್ ೧೦ ರ ಬೃಹತ್ ಧರಣಿ ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ.
ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ದುಂಡಿ ಧರಣಿಯ ಸಭೆಯಲ್ಲಿ ನಿರ್ಣಯಗಳನ್ನು ಮಂಡಿಸಿದರು.
