ಸುದ್ದಿ ಕನ್ನಡ ವಾರ್ತೆ

ರಾಜ್ಯದ ಸಂಸದರು, ಮತ್ತು ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಗಂಭೀರ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು.

ಈ ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ಬಿ. ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಳದ ಅಧ್ಯಕ್ಷರು, ಕ್ಯಾಂಪ್ಕೋ ಅಧ್ಯಕ್ಷರಾದ ಎಸ್. ಆರ್. ಸತೀಶ್‌ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಚರ್ಚೆಯಲ್ಲಿ, ಕನಿಷ್ಠ ಆಮದು ಬೆಲೆ (MIP) ನಿಯಮಗಳನ್ನು ಉಲ್ಲಂಘಿಸಿ, ಸುಂಕ ರಹಿತವಾಗಿ ದೇಶದೊಳಗೆ ಅಕ್ರಮವಾಗಿ ಬರುವ ಕಡಿಮೆ ಮೌಲ್ಯದ ಅಡಿಕೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಆಗ್ರಹಿಸಲಾಯಿತು. ಜತೆಗೆ, ‘ಒಂದು ದೇಶ, ಒಂದು ತೆರಿಗೆ’ಯ ಆಶಯದಂತೆ ಸಹಕಾರ ಸಂಸ್ಥೆಗಳ ಮೇಲಿರುವ ಹೆಚ್ಚುವರಿ ಸ್ಥಳೀಯ ತೆರಿಗೆ ಹೊರೆಯನ್ನು ತೆರವುಗೊಳಿಸಿ, ಖಾಸಗಿ ವ್ಯಾಪಾರಿಗಳೊಂದಿಗೆ ಸಮಾನ ಪೈಪೋಟಿಗೆ ಅವಕಾಶ ಕಲ್ಪಿಸ ಬೇಕೆಂದು ಮನವಿ ಮಾಡಲಾಯಿತು. ಈ ಕುರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿದರು.

​ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗವು, ಅಡಿಕೆ ತೋಟಗಳಿಗೆ ಶಿಲೀಂಧ್ರನಾಶಕವಾಗಿ ಬಳಸುವ ಕಾಪರ್ ಸಲ್ಫೇಟ್ (ಮೈಲು ತುತ್ತ )ಮೇಲಿನ ಜಿಎಸ್‌ಟಿ ದರವನ್ನು ಹಾಲಿ ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸುವಂತೆ ಕೋರಿತು.

ಅಕ್ರಮ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಯಲು ದೇಶದ ವಿವಿಧ ಬಂದರುಗಳಲ್ಲಿ ತಪಾಸಣೆ ಮತ್ತು ಜಾಗರೂಕತೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.
ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಬ್ಬರೂ ಕೇಂದ್ರ ಸಚಿವರಿಗೆ ನಿಯೋಗವು ಕೃತಜ್ಞತೆಗಳನ್ನು ಅರ್ಪಿಸಿದೆ .