ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ಪ್ರತಿಷ್ಠಿತ ಎಂ.ಇ.ಎಸ್ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕರಾದ ವೆಂಕಟೇಶ್‌ ಬಡಗೇರಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಶೋಧನಾ ಪ್ರತಿಭೆಯನ್ನು ಸಾಬೀತುಪಡಿಸಿ ತಾಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ದೆಹಲಿಯಲ್ಲಿ ಏಪ್ರಿಲ್ 8 ರಿಂದ 10 ರವರೆಗೆ ನಡೆದ ಪ್ರತಿಷ್ಠಿತ ಇಂಡಿಯಾ ಕಾಮ್ 2026′ (INDIACom-2026) ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, “Comparative Study of 1D & 2D Photonic Crystal Based Biosensor for Detection of Plasmodium Parasite in Cells” ಎಂಬ ಮಹತ್ವದ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಇವರ ಈ ವಿಶಿಷ್ಟ ಸಂಶೋಧನಾ ಪ್ರಬಂಧವು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ‘ಐಇಇಇ’ (IEEE) ಪೇಪರ್‌ನಲ್ಲಿ ಪ್ರಕಟಗೊಳ್ಳಲಿದೆ.

ದೇಶ-ವಿದೇಶಗಳ ಅನೇಕ ತಜ್ಞರು, ವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಿದ್ದ ಈ ಬೃಹತ್ ಸಮಾವೇಶದಲ್ಲಿ ಶಿರಸಿಯ ಉಪನ್ಯಾಸಕರೊಬ್ಬರು ಈ ಮಟ್ಟದ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವೆಂಕಟೇಶ್ ಬಡಗೇರಿ ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರ ಈ ಸಾಧನೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ.