ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ನಡೆಸುವ ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಳೆದ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಆಯೋಗ ಹೊರಡಿಸಿದ್ದ ವಿಶೇಷ ಪರಿಷ್ಕರಣೆ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠ, ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಚುನಾವಣಾ ಆಯೋಗಕ್ಕೆ ಯಾವುದೇ ಸಮಯದಲ್ಲಿ ಲಿಖಿತ ಕಾರಣಗಳೊಂದಿಗೆ ವಿಶೇಷ ಪರಿಷ್ಕರಣೆ ನಡೆಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆ ಕಾಯ್ದೆ ಅಥವಾ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ಕೈಬಿಡುವ ಸಂದರ್ಭಗಳಲ್ಲಿ ಪೌರತ್ವಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸುವ ಅಧಿಕಾರ ಆಯೋಗಕ್ಕಿದೆ. ಆದರೆ ಅದು ಕೇವಲ ಚುನಾವಣಾ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ.ಮತದಾರರ ಪಟ್ಟಿಯ ನಿಖರತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವುದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗೆ ಅಗತ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಲವು ವರ್ಷಗಳಿಂದ ಸಮಗ್ರ ಪರಿಷ್ಕರಣೆ ನಡೆಯದಿರುವುದು, ಹೆಸರುಗಳ ಪುನರಾವರ್ತನೆ ಹಾಗೂ ವಲಸೆ ಸಮಸ್ಯೆಗಳನ್ನು ಗಮನಿಸಿ ಆಯೋಗ ಕೈಗೊಂಡ ಕ್ರಮ ಸಮಂಜಸವಾಗಿದೆ ಎಂದು ತಿಳಿಸಿದೆ.
2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ತಮ್ಮ ಪೂರ್ವಜರೊಂದಿಗೆ ಸಂಬಂಧ ಸಾಬೀತುಪಡಿಸಬೇಕೆಂಬ ಆಯೋಗದ ನಿಯಮವನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಸುಪ್ರೀಂ ಕೋರ್ಟ್ ಆಯೋಗದ ಕ್ರಮವನ್ನು ಎತ್ತಿಹಿಡಿದು ವಿವಾದಕ್ಕೆ ತೆರೆ ಎಳೆದಿದೆ.
