ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಮರುಪರೀಕ್ಷೆಯ ದಿನಾಂಕ ಕೊನೆಗೂ ಪ್ರಕಟವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಜೂನ್ 21 ರಂದು ನೀಟ್ ಯುಜಿ ಮರುಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ.
ಈ ಮೂಲಕ ಕಳೆದ ಕೆಲವು ದಿನಗಳಿಂದ ಆತಂಕದಲ್ಲಿದ್ದ ದೇಶದ 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಗೊಂದಲಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.
ಮೇ 3 ರಂದು ದೇಶಾದ್ಯಂತ ಅತ್ಯಂತ ಬಿಗಿ ಭದ್ರತೆಯಲ್ಲಿ ನೀಟ್ ಪರೀಕ್ಷೆ ನಡೆಸಲಾಗಿತ್ತು. ಆದರೆ, ಕೆಲವು ಕೇಂದ್ರಗಳಲ್ಲಿ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಕೇಂದ್ರ ಸರ್ಕಾರವು ಮೇ 12 ರಂದು ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಪರೀಕ್ಷೆ ರದ್ದಾದಾಗಿನಿಂದ ಲಕ್ಷಾಂತರ ವಿದ್ಯಾರ್ಥಿಗಳು ಪರಿಷ್ಕೃತ ವೇಳಾಪಟ್ಟಿ, ಹೊಸ ಪ್ರವೇಶ ಪತ್ರ ಹಾಗೂ ಮುಂದಿನ ಪ್ರವೇಶ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆಗಾಗಿ ಕಾತರದಿಂದ ಕಾಯುತ್ತಿದ್ದರು. ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತನ್ನ ಅಧಿಕೃತ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯ ಮೂಲಕ ಹೊಸ ದಿನಾಂಕ ಪ್ರಕಟಿಸಿದೆ. ಭಾರತ ಸರ್ಕಾರದ ಅನುಮೋದನೆಯೊಂದಿಗೆ ಜೂನ್ 21, 2026 ರ ಭಾನುವಾರದಂದು ನೀಟ್ ಯುಜಿ ಮರುಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಾರದರ್ಶಕ ವಾಗಿ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಜೂನ್ 21ರಂದು ಮರುಪರೀಕ್ಷೆ ಕಚಿತವಾಗಿ ನಡೆಯಲಿದೆ ಎಂದು ಸಂಸ್ಥೆ ತನ್ನ ಪೋಸ್ಟ್ನಲ್ಲಿ ತಿಳಿಸಿದೆ. ಹೊಸ ಪರೀಕ್ಷಾ ದಿನಾಂಕ ಪ್ರಕಟವಾಗಿರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಲು ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ. ಪರೀಕ್ಷಾ ಕೇಂದ್ರಗಳು ಮತ್ತು ಹೊಸ ಪ್ರವೇಶ ಪತ್ರಗಳ ಕುರಿತಾದ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್, ಬಿಡಿಎಸ್ ಸೇರಿದಂತೆ ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಈ ಪರೀಕ್ಷೆ ಕಡ್ಡಾಯವಾಗಿರುವುದರಿಂದ, ಮರು ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ದೋಷರಹಿತವಾಗಿ ನಡೆಸಲು ಶಿಕ್ಷಣ ಸಚಿವಾಲಯ ಮುಂದಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಅಪ್ ಡೇಟ್ಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿಗೊಡದೆ, ಕೇವಲ ಎನ್ಟಿಎ ಅಧಿಕೃತ ವೆಬ್ಸೈಟ್ ಹಾಗೂ ಅಧಿಕೃತ ಸಂವಹನ ಮಾಧ್ಯಮಗಳನ್ನು ಮಾತ್ರ ಅವಲಂಬಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
