ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಕೇಂದ್ರ ಸರ್ಕಾರವು ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕವು ಶುಕ್ರವಾರ ಲೋಕಸಭೆಯಲ್ಲಿ ಅಗತ್ಯ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ.

ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ, 2026 ಅನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿತ್ತು. ಆದರೆ ಮತದಾನದ ವೇಳೆ ವಿಧೇಯಕದ ಪರವಾಗಿ 298 ಸಂಸದರು ಮತ್ತು ವಿರುದ್ಧವಾಗಿ 230 ಸಂಸದರು ಮತ ಚಲಾಯಿಸಿದರು. ಇದರಿಂದಾಗಿ ಮೂರನೇ ಎರಡರಷ್ಟು ಬಹುಮತದ ಕೊರತೆಯಿಂದ ವಿಧೇಯಕ ಬಿದ್ದುಹೋಯಿತು.
ಕ್ಷೇತ್ರ ಪುನರ್ವಿಂಗಡಣೆ ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತಾದ ಇತರ ಎರಡು ವಿಧೇಯಕಗಳನ್ನು ಮತದಾನಕ್ಕೆ ಒಳಪಡಿಸಲಿಲ್ಲ. ಈ ವಿಧೇಯಕಗಳು ಮಹಿಳಾ ಮೀಸಲಾತಿಗೆ “ಆಂತರಿಕವಾಗಿ ಸಂಬಂಧಿಸಿವೆ” ಎಂದು ಸರ್ಕಾರ ತಿಳಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು
ಬಲವಾಗಿ ಪ್ರತಿಪಾದಿಸಿದರು.
ಸೀಟುಗಳ ಸಂಖ್ಯೆ ಹೆಚ್ಚಳದಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಪ್ರಧಾನಿ ವೈಯಕ್ತಿಕ ಭರವಸೆ ನೀಡಿದರು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ ರಾಷ್ಟ್ರಹಿತದ ದೃಷ್ಟಿಯಿಂದ ನೋಡಬೇಕೆಂದು ಅವರು ಮನವಿ ಮಾಡಿದರು.
ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಲೋಕಸಭಾ ಸೀಟುಗಳ ಸಂಖ್ಯೆಯನ್ನು 543ರಿಂದ ಸುಮಾರು 816ಕ್ಕೆ ಹೆಚ್ಚಿಸಿದಾಗ ದಕ್ಷಿಣ ರಾಜ್ಯಗಳ
ಪ್ರಾತಿನಿಧ್ಯವನ್ನು ಸಂರಕ್ಷಿಸಲಾಗುವುದು ಅಥವಾ ಸ್ವಲ್ಪ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಮಹಿಳೆಯರಿಗೆ ಮೀಸಲಾತಿ ವಂಚಿಸಲು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.
ಈ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಧೇಯಕವನ್ನು ಕ್ಷೇತ್ರ ಪುನರ್ವಿಂಗಡನೆಯೊಂದಿಗೆ ಜೋಡಿಸುವುದನ್ನು ಬಲವಾಗಿ ವಿರೋಧಿಸಿದರು. “ಇದು ಮಹಿಳಾ ಸಬಲೀಕರಣದ ಬಿಲ್ ಅಲ್ಲ ಬದಲಿಗೆ ಮಹಿಳೆಯರ ಹೆಸರಿನಲ್ಲಿ ದೇಶದ ಚುನಾವಣಾ ನಕ್ಷೆಯನ್ನು ತಮಗೆ ಪೂರಕವಾಗಿ ಬದಲಾಯಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಪ್ರಯತ್ನ,” ಎಂದು ರಾಹುಲ್ ಗಾಂಧಿ ಆರೋಪಿಸಿದರು.ಸರ್ಕಾರವು ಜಾತಿ ಗಣತಿಯನ್ನು ಬೈಪಾಸ್ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಒಬಿಸಿ ಸಹೋದರ ಸಹೋದರಿಯರಿಗೆ ಅಧಿಕಾರ ನೀಡುವ ಬದಲು ಅವರ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ಎಂದು ಅವರು ದೂರಿದರು.