ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಸಾಲಬಾಧೆ ತಾಳಲಾರದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವ ರೈತ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಾಲೂಕಿನ ಚೌಡಳ್ಳಿ ಗ್ರಾಮ ನಿವಾಸಿ ಹನ್ಮಂತ ಯಲ್ಲಪ್ಪ ಬದ್ರಾಪುರ (29) ಆತ್ಮಹತ್ಯೆಗೆ ಶರಣಾದ ರೈತ. ಮೃತ ಹನ್ಮಂತ ಅವರು ಚೌಡಳ್ಳಿಯ ಸರ್ವೇ ನಂಬರ್ 14 ರಲ್ಲಿರುವ ತಮ್ಮ 5 ಎಕರೆ ಜಮೀನಲ್ಲಿ ಅಡಕೆ, ಮೆಕ್ಕೇಜೋಳ ಹಾಗೂ ಶುಂಟಿ ಬೆಳೆ ಬೆಳೆದಿದ್ದು, ಕೃಷಿ ಚಟುವಟಿಕೆಗಾಗಿ ವಿವಿಧೆ ಸುಮಾರು ಒಂದೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಪ್ರಸಕ್ತ ವರ್ಷದ ಬರ ಪರಿಸ್ಥಿತಿಯ ಭಯದಲ್ಲಿ, ಕೃಷಿಯಲ್ಲಿ ನಿರೀಕ್ಷಿತ ಆದಾಯ ಬಾರದೆ, ಮಾಡಿದ ಸಾಲವನ್ನು ತೀರಿಸಲಾಗದೆ ತೀವ್ರ ಮನನೊಂದಿದ್ದರು. ಸಾಲದ ಹೊರೆಯಿಂದ ಕಂಗಾಲಾಗಿದ್ದ ಹನ್ಮಂತ ಜುಲೈ 18 ರಂದು ತಮ್ಮ ಗದ್ದೆಯಲ್ಲೇ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು.
ತಕ್ಷಣ ಅವರಿಗೆ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
