ಸುದ್ದಿ ಕನ್ನಡ ವಾರ್ತೆ
ಸಾಗರ: ಒಂದೆಡೆ ತುಮರಿ ಸೇತುವೆಯ ಲೋಕಾರ್ಪಣೆ ದಿನ ಮುಂದೂಡಲ್ಪಟ್ಟಿರುವುದು ದ್ವೀಪ ವಾಸಿಗಳಲ್ಲಿ ಬೇಸರ ತರಿಸಿರುವ ಸಂದರ್ಭದಲ್ಲಿಯೇ ಅಂಬಾರಗೋಡ್ಲು ತುಮರಿ ನಡುವೆ ಸಂಚರಿಸುವ ಹೊಳೆಬಾಗಿಲು ಲಾಂಚ್‌ನ ಸ್ಟೇರಿಂಗ್ ಜಾಮ್ ಆಗಿ ಆತಂಕ ಮೂಡಿಸಿದ ಘಟನೆ ತಾಲೂಕಿನ ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ಗುರುವಾರ ನಡೆದಿದೆ.
ನೂರಕ್ಕೂ ಹೆಚ್ಚಚು ಜನರು, ಪೂರ್ಣ ಪ್ರಮಾಣದ ಇತರ ವಾಹನಗಳನ್ನು ಹೊತ್ತಿದ್ದ ಲಾಂಚ್‌ನಲ್ಲಿ ಈ ದೋಷ ಕಾಣಿಸಿಕೊಂಡಿದೆ. ಆದರೆ ತಕ್ಷಣ ಹತ್ತಿರದಲ್ಲೇ ಇದ್ದ ದಿಲೀಪ್ ಬಿಲ್ಡರ್ಸ್ ಬೋಟಿನಿಂದ ಲಾಂಚನ್ನು ದಡ ಸೇರಿಸಲಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.
ಹೊಳೆಬಾಗಿಲು ಲಾಂಚಿನಿಂದ ತಿಂಗಳಿಗೆ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ವರಮಾನ ಜಲಾನಯನ ಇಲಾಖೆಗೆ ಬರುತ್ತಿದ್ದರೂ ಇವುಗಳ ದುರಸ್ಥಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹಾಳಾದ ಲಾಂಚಿನ ಸ್ಟೇರಿಂಗ್ ಹಾಳಾಗಿ ಒಂದು ವಾರ ಕಳೆಯುತ್ತಾ ಬಂದರೂ ಸರಿಯಾದ ರಿಪೇರಿ ಕಾರ್ಯ ಮಾಡಿರುಲಿಲ್ಲ. ಈ ಲಾಂಚುಗಳಲ್ಲಿ ಅರೆಕಾಲಿಕ ನೌಕರರೇ ಹೆಚ್ಚು ಇದ್ದು ಅವರ ವೇತನ ಪಾವತಿಯಾಗದೆ ಸುಮಾರು ಆರು ತಿಂಗಳ ವೇತನ ಬಾಕಿ ಇದ್ದು ಸಂಬಳ ಇಲ್ಲದೆ ದುಡಿಯುವವರ ಆಲಸ್ಯವೂ ಇದಕ್ಕೆ ಇನ್ನೊಂದು ಕಾರಣವಾಗಿರಬಹುದು ಎಂದು ಇಲ್ಲಿನವರು ಪ್ರತಿಪಾದಿಸುತ್ತಿದ್ದಾರೆ.