ಸುದ್ದಿ ಕನ್ನಡ ವಾರ್ತೆ

ಮುಂಬೈ – ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರು ‘ಹಲಾಲ್ ಪ್ರಮಾಣಪತ್ರ’ದ ಮೇಲೆ ನಿಷೇಧ ಹೇರಿರುವುದನ್ನು ಅನುಸರಿಸಿ, ಮಹಾರಾಷ್ಟ್ರದಲ್ಲೂ ಹಲಾಲ್ ಪ್ರಮಾಣಿತ ಉತ್ಪನ್ನಗಳ ನಿಷೇಧಕ್ಕೆ ಬೇಡಿಕೆ ಇಡಲಾಗಿದೆ. ಈ ಬೇಡಿಕೆಯನ್ನು ಪರಿಗಣಿಸಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ. ಏಕನಾಥ್ ಶಿಂಧೆ ಅವರು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಯದರ್ಶಿಗೆ ಪ್ರಸ್ತಾವನೆ ಮಂಡಿಸಲು ಸೂಚನೆ ನೀಡಿದ್ದಾರೆ.

 

ಇತ್ತೀಚೆಗೆ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಮಂಡಿಸಿದ್ದರು. ಈ ಸಂದರ್ಭದಲ್ಲಿ ಸಮಿತಿಯ ಮುಂಬೈನ ಶ್ರೀ. ಸತೀಶ್ ಸೋನಾರ್, ಶ್ರೀ. ರವಿ ನಲಾವಡೆ ಮತ್ತು ನಾಂದೇಡ್‌ನಿಂದ ಶಿವಸೇನೆ ಶಾಸಕ ಶ್ರೀ. ಆನಂದ್ ತಿಡ್ಕೆ (ಬೊಂಡಾರ್ಕರ್) ಇವರು ಉಪಸ್ಥಿತರಿದ್ದರು. ಸಮಿತಿಯ ಹೇಳಿಕೆಯಲ್ಲಿ `ಒಂದು ‘ಧರ್ಮನಿರಪೇಕ್ಷ’ ವ್ಯವಸ್ಥೆಯಲ್ಲಿ ಧಾರ್ಮಿಕ ಆಧಾರದ ಮೇಲೆ ಉತ್ಪನ್ನಗಳ ಪ್ರಮಾಣೀಕರಣ ಮಾಡುವುದು ಅಸಂವಿಧಾನಿಕವಾಗಿದೆ. ಮಹಾರಾಷ್ಟ್ರದಲ್ಲಿ ಹಲಾಲ್ ಪ್ರಮಾಣಿತ ಉತ್ಪನ್ನಗಳ ನಿಷೇಧ ಹೇರಿದರೆ ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ.

 

ಆಹಾರ ಉತ್ಪನ್ನಗಳ ಸಂದರ್ಭದಲ್ಲಿ ಕಾನೂನಿನ ಅನುಸಾರ ‘ಭಾರತೀಯ ಆಹಾರ ಭದ್ರತೆ ಮತ್ತು ಮಾನದಂಡ ಪ್ರಾಧಿಕಾರ’ (FSSAI) ಒಂದು ಸರಕಾರಿ ಸಂಸ್ಥೆಯಾಗಿದ್ದು, ಆಹಾರ ಉತ್ಪನ್ನಗಳ ಗುಣಮಟ್ಟ ನಿರ್ಧಾರ ಮಾಡಲು ಮತ್ತು ಪ್ರಮಾಣಪತ್ರ ನೀಡಲು ಅಧಿಕಾರ ಹೊಂದಿದೆ. ಆದರೆ ‘ಹಲಾಲ್ ಪ್ರಮಾಣಪತ್ರ’ವು ಒಂದು ಸಮಾಂತರ ವ್ಯವಸ್ಥೆಯಂತೆ ಸ್ಥಾಪನೆಯಾಗಿದ್ದು, ಆಹಾರದ ಗುಣಮಟ್ಟದ ಬಗ್ಗೆ ಗೊಂದಲ ಸೃಷ್ಟಿಸುವ ಮೂಲಕ ಸರಕಾರಿ ನಿಯಮಗಳನ್ನು ಉಲ್ಲಂಘಿಸುತ್ತಿದೆ.

ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ‘ಹಲಾಲ್ ಇಂಡಿಯಾ’, ‘ಹಲಾಲ್ ಸರ್ಟಿಫಿಕೇಶನ್ ಸರ್ವಿಸಸ್ ಇಂಡಿಯಾ’, ‘ಜಮಿಯತ್ ಉಲ್ಮಾ-ಎ-ಹಿಂದ್’, ‘ಜಮಿಯತ್ ಉಲ್ಮಾ-ಎ-ಮಹಾರಾಷ್ಟ್ರ’ ಮುಂತಾದ ಹಲವಾರು ಖಾಸಗಿ ಸಂಸ್ಥೆಗಳು ಅನುಮಾನಾಸ್ಪದವಾಗಿ ಹಲಾಲ್ ಪ್ರಮಾಣಪತ್ರಗಳನ್ನು ವಿತರಿಸಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸುತ್ತಿವೆ. ಈ ಕಾರಣಕ್ಕಾಗಿ ಉತ್ತರಪ್ರದೇಶದಲ್ಲಿ ಈ ಪ್ರಮಾಣಪತ್ರದ ಮೇಲೆ ನಿಷೇಧ ಹೇರಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ `ಯಾವುದೇ ಖಾಸಗಿ ಸಂಸ್ಥೆಗೆ ಪ್ರಮಾಣಪತ್ರ ವಿತರಿಸುವ ಮತ್ತು ಹಣ ಸಂಗ್ರಹಿಸುವ ಹಕ್ಕಿಲ್ಲ` ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಕೇವಲ ಹಣಕಾಸು ಹಗರಣವಷ್ಟೇ ಅಲ್ಲದೆ, ಈ ಹಣವನ್ನು ಲಷ್ಕರ್-ಎ-ತೊಯ್ಬಾ, ಇಂಡಿಯನ್ ಮುಜಾಹಿದೀನ್, ಇಸ್ಲಾಮಿಕ್ ಸ್ಟೇಟ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಸುಮಾರು 700 ಆರೋಪಿಗಳ ಕಾನೂನು ಸಹಾಯಕ್ಕೆ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಇದರಲ್ಲಿ ಸೇರಿವೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಉಪಮುಖ್ಯಮಂತ್ರಿ ಶ್ರೀ. ಶಿಂಧೆ ಅವರಿಗೆ ಒಂದು ಮನವಿ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿತ್ತು.

*ಸಮಿತಿಯ ಬೇಡಿಕೆಗಳು :*

1. ಮಹಾರಾಷ್ಟ್ರದಲ್ಲಿ ಅನಧಿಕೃತವಾಗಿ ಹಲಾಲ್ ಪ್ರಮಾಣಪತ್ರ ನೀಡುತ್ತಿರುವ ಖಾಸಗಿ ಸಂಸ್ಥೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು.

2. ಹಲಾಲ್ ಪ್ರಮಾಣಪತ್ರ, ಹಿಂದೂಗಳ ಸಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರುತ್ತಿರುವುದರಿಂದ ತಕ್ಷಣವೇ ನಿಷೇಧಿಸಬೇಕು.

3. ಹಲಾಲ್ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಸಂಗ್ರಹಿಸಿದ ಹಣದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು.

4. ಹಲಾಲ್ ಪ್ರಮಾಣಪತ್ರದ ಮೂಲಕ ಸಂಗ್ರಹಿಸಿದ ಅನಧಿಕೃತ ಆಸ್ತಿಯನ್ನು ಬಡ್ಡಿಯೊಂದಿಗೆ ವಾಪಸು ಪಡೆಯಬೇಕು.

5. ಈ ಹಣವನ್ನು ಎಲ್ಲಿ ಬಳಸಲಾಗಿದೆ ಮತ್ತು ಇದು ದೇಶದ ಭದ್ರತೆಗೆ ಅಪಾಯ ಉಂಟುಮಾಡಿದೆಯೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು.

ಈ ಬೇಡಿಕೆಗಳ ಬಗ್ಗೆ ಉಪಮುಖ್ಯಮಂತ್ರಿಯವರು ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಮಂಡಿಸಲು ಸೂಚನೆ ನೀಡಿದ್ದಾರೆ.