Banner Ad

ಸುದ್ದಿ ಕನ್ನಡ ವಾರ್ತೆ

ಮುದ್ದೇಬಿಹಾಳ: ಏಕಾಏಕಿ ಅಡ್ಡಬಂದ ವಯೋವೃದ್ದೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆಯ ಬಸ್ಸೊಂದು ರಸ್ತೆ ಪಕ್ಕದ ತಗ್ಗಿಗೆ ಉರುಳಿದ್ದು ಚಾಲಕ, ನಿರ್ವಾಹಕ, ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಗೆದ್ದಲಮರಿ ಗ್ರಾಮದ ಹತ್ತಿರ ಆಲಮಟ್ಟ ರಸ್ತೆಯಲ್ಲಿ ನಡೆದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ಸಾರಿಗೆ ಘಟಕಕ್ಕೆ ಸೇರಿದ ಬಾಗಲಕೋಟೆ-ಮುದ್ದೇಬಿಹಾಳ ಮಾರ್ಗದ ಬಸ್ (ಕೆಎ29 ಎಫ್1173) ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಬಂದು ಮರಳಿ ಬಾಗಲಕೋಟೆಗೆ ಹೋಗುವಾಗ ಈ ಘಟನೆ ನಡೆದಿದೆ.

Banner Ad

ಬಸ್ಸಿನಲ್ಲಿ ಐವರು ಪ್ರಯಾಣಿಕರಿದ್ದರು. ಗಾಯಗೊಂಡ ಎಲ್ಲರಿಗೂ ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡಿರುವ ತಾಯಿ ಈರಮ್ಮ ಕಂಬಾರ, ಮಗಳು ಸಂಗಿತಾ ಕಂಬಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಈ ಕುರಿತು ಚಾಲಕ ಬಸವರಾಜ ಗೋಪಾಲ ರಾಠೋಡ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸೈ ಸಂಜಯ್ ತಿಪ್ಪರಡ್ಡಿ, ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ ಅವರು ಧಾವಿಸಿ ಬಸ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಿ ಸಂಚಾರ ಸುಗಮಗೊಳಿಸಲು ನೆರವಾದರು. ಚಾಲಕನ ಸಮಯಪ್ರಜ್ಞೆಯಿಂದ ವಯೋವೃದ್ದೆಯ ಪ್ರಾಣ ಉಳಿಯಿತಾದರೂ ಬಸ್‌ನಲ್ಲಿರುವ ಪ್ರಯಾಣಿಕರು ಗಾಯಗೊಂಡದ್ದು ಚರ್ಚೆಗೆಡೆಮಾಡಿಕೊಟ್ಟಿತು.

Banner Ad