ಸುದ್ದಿ ಕನ್ನಡ
ಗೋವಾ: ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು, ಗೋವಾ ಇದರ ಅಧ್ಯಕ್ಷರಾದ ಶ್ರೀಮತಿ ಶೀಲಾ ಮೇಸ್ತ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪರಿಷತ್ತಿನ ನೂತನ ಲೋಗೋ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಗೋವಾ ರಾಜ್ಯದ ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಸಾರಿಗೆ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಮೌವಿನ್ ಗುದಿನ್ಹೋ ಅವರು ಉದ್ಘಾಟಿಸಿ ಮಾತನಾಡಿ ಶ್ರಮ ಜೀವಿಗಳಾಗಿರುವ ಕನ್ನಡಿಗರು ದೇಶದ ವಿವಿಧಡೆ ವಾಸವಾಗಿದ್ದಾರೆ.ಗೋವಾದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಮಹತ್ವದ್ದಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೀಲಾ ಮೇಸ್ತ ಅವರು ಆಯೋಜಿಸಿರುವ ಇಂತಹ ಕಾರ್ಯಕ್ರಮಗಳಿಗೆ ತಮ್ಮ ನಿರಂತರ ಸಹಕಾರ ಇರಲಿದೆ ಹಾಗೂ ಕನ್ನಡಿಗರು ಕೂಡ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷರಾದ ಡಾ. ಸಿದ್ದಣ್ಣ ಮೇಟಿ ಅವರು ಮಾತನಾಡಿ, ಗೋವಾದಲ್ಲಿ ಕನ್ನಡ ಕಾರ್ಯಕ್ರಮಗಳ ನಿರೂಪಣೆಗಾಗಿ ಬೇರೆ ರಾಜ್ಯಗಳಿಂದ ನಿರೂಪಕರನ್ನು ಆಹ್ವಾನಿಸುವ ಪರಿಸ್ಥಿತಿಯಿತ್ತು ಆದರೆ ಶೀಲಾ ಮೇಸ್ತ ಅವರು ಬಹುಭಾಷಾ ನಿರೂಪಣಾ ಕೌಶಲ್ಯ ಹೊಂದಿದ್ದು ಗೋವಾದಲ್ಲಷ್ಟೇ ಅಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಕಾರ್ಯಕ್ರಮಗಳನ್ನು ನಿರೂಪಿಸುತ್ತಿರುವುದು ಹೆಮ್ಮೆಯ ಸಂಗತಿ. ಇದೀಗ ಅವರು ಸಾಂಸ್ಕೃತಿಕ ಕ್ಷೇತ್ರದ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯ ಕೈಗೊಳ್ಳುವ ಹಂಬಲ ಹೊಂದಿದ್ದಾರೆ. ಇವರಿಗೆ ಎಲ್ಲಾ ಕನ್ನಡಿಗರು ಹಾಗೂ ಗೋವಾ ಸರ್ಕಾರ ಬೆಂಬಲ ಹಾಗೂ ಸಹಕಾರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು
ಬಿಜೆಪಿ ಕರ್ನಾಟಕ ಸೆಲ್ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಶ್ರೀ ಮುರಳಿ ಮೋಹನ ಶೆಟ್ಟಿ ಅವರು ಮಾತನಾಡಿ, ಮಹಿಳೆಯಾಗಿ ಶೀಲಾ ಮೇಸ್ತ ಅವರು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಅವರ ಕನ್ನಡಪರ ಕಾರ್ಯಗಳಿಗೆ ಕನ್ನಡಪರ ಸಂಘಟನೆಗಳು, ಉದ್ಯಮಿಗಳು ಹಾಗೂ ಕನ್ನಡಿಗರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಡಾ. ವಿಶ್ವನಾಥ ಧುಮಾಳ ಅವರು ಮಾತನಾಡಿ, ಶೀಲಾ ಮೇಸ್ತ ಅವರು ವಿವಿಧ ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ನಿರೂಪಣೆಯ ಜೊತೆಗೆ ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಗೋವಾದ ಕನ್ನಡಪರ ಸಂಘಟನೆಗಳು ಅವರಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತೆ ಶಿಫಾರಸು ಮಾಡಬೇಕು ಎಂದು ಹೇಳಿದರು.
ವಾಸ್ಕೋ ಕ್ಷೇತ್ರದ ಶಾಸಕರಾದ ಶ್ರೀ ಕೃಷ್ಣ ಸಾಳಕರ (ದಾಜಿ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆದ ಸಾಧಕರು ಇನ್ನು ಹೆಚ್ಚಿನ ಉತ್ಸಾಹ ದೊಂದಿಗೆ ತಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕು. ಕನ್ನಡಿಗರು ತುಂಬಾ ಸಹಕಾರ ಮನೋಭಾವದವರು ಅವರಿಗೆ ನನ್ನ ಬೆಂಬಲ ಸಂಪೂರ್ಣವಾಗಿ ಇರಲಿದೆ. ಇಂದು ಶೀಲಾ ಮೇಸ್ತ ಅವರ ಸಂಘಟನಾ ಚತುರತೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡೋ-ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕರು ಹಾಗೂ ಖ್ಯಾತ ಇಂಗ್ಲಿಷ್ ಸಾಹಿತಿಗಳಾದ ಡಾ. ಅರವಿಂದ್ ಯಾಳಗಿ ಅವರು ಮಾತನಾಡಿ, ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅನೇಕ ಕನ್ನಡಪರ ಕಾರ್ಯಗಳನ್ನು ಕೈಗೊಂಡಿದ್ದು, ಮುಂದೆಯೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ತಮ್ಮ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಮಾಧವ ನಾಯಕ, ಜಿಲ್ಲಾಧ್ಯಕ್ಷರು ಜನಶಕ್ತಿ ವೇದಿಕೆ ಕಾರವಾರಡಾ. ವಿಶ್ವನಾಥ ದುಮ್ಮಾಳ,ರಾಜ್ಯಾಧ್ಯಕ್ಷರು ಸರ್ಕಾರಿ ಹಾಗೂ ಅರೆ ಸರ್ಕಾರ ನೌಕರರ ಸಂಘ ಬೆಂಗಳೂರು, , ಹನುಮಂತ ನರಸಲಗಿ ನಿವೃತ್ತ ಸೈನಿಕರು ಶ್ರೀಮತಿ ನಿಧಿ ಸಾಂಕೆ, ನಟಿ ಮತ್ತು ಭರತನಾಟ್ಯ ಕಲಾವಿದರು,ಶಿವಾನಂದ ಬಿಂಗಿ, ಅಧ್ಯಕ್ಷರು ಕನ್ನಡ ಸಂಘ ಜವಾರಿನಗರ ಸಂಘದ ಕಾರ್ಯದರ್ಶಿ ಪ್ರದೀಪ ಮೇಸ್ತ, , ಖಜಾಂಚಿ ಗಜೇಂದ್ರ ಮೇಸ್ತ , ಸುರೇಂದ್ರ ಮೇಸ್ತ, ನೌಫುಲ್ ಮಂಗಳೂರ, ಆಶಾ ಮೇಸ್ತ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಂತರ ನಾಟ್ಯ ಲಾವಣ್ಯ ಭರತನಾಟ್ಯ ತಂಡದವರಿಂದ ಭರತನಾಟ್ಯ ಹಾಗೂ ಚಂದ್ರಶೇಖರ್ ವಾಲ್ಮೀಕಿ ಅವರಿಂದ ಸಂಗೀತ ಕಾರ್ಯಕ್ರಮ ಜರಗಿತುಕಾರ್ಯಕ್ರಮದ ನಿರೂಪಣೆಯನ್ನು ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಶೀಲಾ ಮೇಸ್ತ ಅವರು ಬಹುಭಾಷಾ ಶೈಲಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಶ್ರೀ ದಾವಲಸಾಬ ನದಾಫ್ ಸ್ವಾಗತಿಸಿದರು. ಶ್ರೀ ವಿ.ಟಿ. ಆರಿಬೆಂಚಿ ವಂದನಾರ್ಪಣೆ ಮಾಡಿದರು.
ಗೋವಾದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುವುದರ ಜೊತೆಗೆ ಕನ್ನಡಿಗರ ಸಾಧನೆಗೆ ಗೌರವ ಸಲ್ಲಿಸುವ ಮೂಲಕ ಈ ಕಾರ್ಯಕ್ರಮವು ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಸಂಘಟನಾ ಶಕ್ತಿಯ ಮಹತ್ವವನ್ನು ಸಾರಿತು.
