ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಧಾರ್ಗಳ್ ನಲ್ಲಿ ನಡೆದಿದೆ ಎನ್ನಲಾದ 28,825 ಚದರ ಮೀಟರ್ ಅಕ್ರಮ ಭೂ ವ್ಯವಹಾರ ಪ್ರಕರಣದಲ್ಲಿ ಕರ್ನಾಟಕದ ಬೆಂಗಳೂರು ಮೂಲದ ಕಂಪನಿಗೆ 8 ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ಕರ್ನಾಟಕ ಪೋಲಿಸರು ಮಾಪ್ಸಾ ಮಾಜಿ ಕಾರ್ಪೊರೇಟರ್ ತಾರಕ್ ಅರೋಲ್ಕರ್ ರವರನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ದೇವಿರಕ್ಷಾ ಎಸ್ಟೇಟ್ಸ ಪ್ರೈ .ಲಿ ಕಂಪನಿಯ ಪ್ರತಿನಿಧಿ ದರ್ಶನ್ ಎಸ್ ರವರು ಈ ಕುರಿತಂತೆ ಸದಾಶಿವ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಗೋವಾದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ದರ್ಶನ್ ರವರಿಗೆ ಭೂಮಿ ಬೇಕಿತ್ತು. ಮಾರ್ಚ 2023 ರಲ್ಲಿ ಪರಿಚಯಸ್ಥರ ಮೂಲಕ ಗೋವಾದಲ್ಲಿ ಭೂಮಿಯನ್ನು ಹುಡುಕುತ್ತಿದ್ದಾಗ ಯೋಗೇಶ್ ಎಂಬ ವ್ಯಕ್ತಿ ಗೋವಾದ ಧಾರ್ಗಳ್ ನಲ್ಲಿರುವ ಸರ್ವೆ ನಂ 177/1 ರಲ್ಲಿ 28,825 ಚದರ ಮೀಟರ್ ಜಮೀನನ್ನು ಅವರಿಗೆ ತೋರಿಸಿದರು.

ಈ ಭೂಮಿ ತಾರಕ್ ಅರೋಲ್ಕರ್ ರವರಿಗೆ ಸೇರಿದ್ದು ಎಂದು ಹೇಳಿ 19 ಕೋಟಿ ರೂ ಗೆ ಭೂ ಒಪ್ಪಂದ ಮಾಡಿಕೊಂಡರು. ಶಂಕಿತರು ಕಂಪನಿಯಿಂದ 19 ಕೋಟಿ ರೂ ಪಡೆದುಕೊಂಡರು, ಆದರೆ ಶಂಕಿತರು ಭೂಮಿಯನ್ನು ನೋಂದಾಯಿಸಲಿಲ್ಲ.

ಕಂಪನಿಯು ಅನುಮಾನದ ಕಾರಣ ತನಿಖೆ ನಡೆಸಿದಾಗ ಅರೋಲ್ಕರ್ ರವರು 2020 ರ ಮಾರ್ಚ 20 ರಂದು ಪ್ರೇಮಚಂದ್ ಗೋಯಲ್ ಮತ್ತು 2021 ರ ಅಗಷ್ಟ 2 ರಂದು ಛವಿ ಗೋಯಲ್ ರವರಿಗೆ ಸದ್ರಿ ಭೂಮಿಯನ್ನು ವರ್ಗಾಯಿಸಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಕಂಪನಿಯು ತನ್ನ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿತು.

ಅರೋಲ್ಕರ್ 2025 ರಲ್ಲಿ ಕಂಪನಿಗೆ 3 ಚೆಕ್ ಗಳನ್ನು ನೀಡಿದ್ದರು. ಇವುಗಳಲ್ಲಿ ಎರಡು ಚೆಕ್ ಬೋನ್ಸ ಆಗಿದೆ. ಶಂಕಿತರು ಕಂಪನಿಗೆ 8,19,13,080 ರೂ ವಂಚಿಸಿರುವದಾಗಿ ಬೆಳಕಿಗೆ ಬಂದಿದೆ. ಈ ಕುರಿತ ಪೋಲಿಸ್ ದೂರಿನ ಹಿನ್ನೆಲೆಯಲ್ಲಿ ಸದಾಶಿವನಗರ ಪೋಲಿಸರು ತಾರಕ್ ಜೊತೆಗೆ ಯೋಗೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ಪೋಲಿಸರು ಗೋವಾದಿಂದ ತಾರಕ್ ಅರೋಲ್ಕರ್ ರವರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.