ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ರಾಷ್ಟ್ರೀಯ ಹೆದ್ದಾರಿಯ ಫುಲಾಂಚೊ ಕುರಿಸ್ ಬಳಿ ಕಾರೊಂದು ಭೀಕರ ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಭೀಕರ ಘಟನೆಯಲ್ಲಿ ಕಾರಿನಲ್ಲಿದ್ದ ಮೂವರ ಪೈಕಿ ಯಶ್ ಮೆಹ್ತಾ (19) ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಒಬ್ಬ ವ್ಯಕ್ತಿ ಹೊರ ಬರಲು ಸಾಧ್ಯವಾಗದೆಯೇ ಕಾರಿನಲ್ಲಿಯೇ ಬೆಂಕಿಗಾಹುತಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ರಕ್ಷಿಸಲಾಗಿದೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪಣಜಿಯ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಿದರು.

ಶನಿವಾರ ಬೆಳಗಿನ ಜಾವ 4 ಗಂಟೆಯ ಸುಮಾರು ಈ ಅಪಘಾತ ಸಂಭವಿಸಿದೆ. ನಿದ್ದೆಯ ಮಂಪರಿನಿಂದ ಈ ಅಪಘಾತ ಸಂಭವಿಸಿದೆ ಎಂದು ಪೋಲಿಸರು ಅಂದಾಜಿಸಿದ್ದಾರೆ. ಪಣಜಿಯಿಂದ ಮಡಗಾಂವ್ ಗೆ ಹೋಗುತ್ತಿದ್ದ ಇಕೊ ಸ್ಪೋರ್ಟ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಬಾಂಬೋಲಿಯ ಫುಲಾಂಚೆ ಕುರಿಸ್ ಬಳಿ ಆಗಮಿಸುತ್ತಿದ್ದಂತೆಯೇ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿನ ಕ್ರ್ಯಾಶ್ ಬ್ಯಾರಿಯರ್ ಗೆ ಡಿಕ್ಕಿ ಹೊಡೆದು ಸರ್ವೀಸ್ ರೋಡ್ ಗೆ ಹೋಗಿ ಡಿಕ್ಕಿ ಹೊಡೆದು ಕ್ಷಣಾರ್ಧದಲ್ಲಿ ಬೆಂಕಿಹೊತ್ತಿಕೊಂಡಿದೆ. ಇಡೀ ಕಾರು ಬೆಂಕಿಗಾಹುತಿಯಾಗಿದೆ. ಅಪಘಾತದ ಸಂದರ್ಭದಲ್ಲಿ ಭಾರಿ ಸ್ಫೋಟದ ಸದ್ಧು ಬಂದಿದೆ ಎನ್ನಲಾಗಿದೆ.