ಸುದ್ಧಿಕನ್ನಡ ವಾರ್ತೆ
ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ಬಂದಿದ್ದ ಕರ್ನಾಟಕದ ವಿಜಯಪುರ ಮೂಲದ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ಇದೀಗ ಗೋವಾದಲ್ಲಿ ನಡೆದಿದೆ. ಹೌದು…ಗೋವಾದಲ್ಲಿ ಕನ್ನಡಿಗ ಟ್ರಕ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಗೋವಾದ ಪೆಡ್ನೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವುದು ಎಲ್ಲೆಡೆ ಭಾರಿ ಆಕ್ರೋಷಕ್ಕೆ ಕಾರಣವಾಗಿದೆ. ಗೋವಾದಲ್ಲಿ ಕನ್ನಡಿಗರ ಸಮಸ್ಯೆಗೆ ಕರ್ನಾಟಕ ಸರ್ಕಾರ ಸ್ಪಂಧಿಸದಿರುವುದು ಖೇದಕರ ಸಂಗತಿಯಾಗಿದೆ.
ಟ್ರಕ್ ಚಾಲಕ ಹಾಗೂ ಮಾಲಕರಾಗಿರುವ ಅನೀಲ್ ರಾಠೋಡ್ ಎಂಬ ವಿಜಯಪುರ ಕಲಕೇರಿ ಗ್ರಾಮದ ವ್ಯಕ್ತಿಯಾಗಿದ್ದಾರೆ. ಕಳೆದ ಸುಮಾರು 6 ತಿಂಗಳಿಂದ ಸ್ಥಳೀಯ ಟ್ರಕ್ ಅಸೋಸಿಯೇಶನ್ ತೊಂದರೆ ಕೊಡುತ್ತಿರುವುದಾಗಿ ಸ್ಥಳೀಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದರೂ ಕೂಡ ಪೋಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಹಲ್ಲೆಗೊಳಗಾದ ಟ್ರಕ್ ಚಾಲಕ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಗೆ ದಾಖಲಿಸಲಾಗಿದೆ. ಇವರ ಕಿವಿಗೆ ಹೊಡೆತ ಬಿದ್ದಿದ್ದು, ದೇಹದ ಇತರ ಭಾಗಗಳಿಗೂ ಕರುಣಾಹೀನವಾಗಿ ಹಲ್ಲೆ ನಡೆಸಿರುವುದು ಕಂಡುಬಂದಿದೆ.
ಘಟನೆಯ ವಿವರ:
ಗೋವಾಕ್ಕೆ ಬಂದು ಕನ್ನಡಿಗರು ಇಲ್ಲಿ ಟ್ರಕ್ ಚಾಲಕರಾಗಿ ಸೇರಿಕೊಂಡು ನಂತರ ಸ್ವಂತ ಟ್ರಕ್ ಖರೀದಿಸಿ ಗೋವಾದ ಜನರ ವ್ಯವಹಾರವನ್ನು ಹಾಳುಮಾಡುತ್ತಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಸ್ಥಳೀಯ ಟ್ರಕ್ ಅಸೋಸಿಯೇಶನ್ ಟ್ರಕ್ ಚಾಲಕ ಮಾಲಕರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸುವಾಗ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆಯನರ್ನೂ ಹಾಕಿದ್ದಾರೆ ಎನ್ನಲಾಗಿದೆ. ಟ್ರಕ್ ಚಾಲಕ ಹಾಗೂ ಮಾಲಕರಾಗಿರುವ ಅನೀಲ್ ರಾಠೋಡ್ ರವರು ಕನ್ನಡಿಗರ ಮತ್ತು ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ಪೋಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಅನೀಲ್ ರಾಠೋಡ್ ರವರು ತಮ್ಮ ಟ್ರಕ್ ನಲ್ಲಿ ಮರಳು ಸಾಗಾಟ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಕಾನೂನುಪ್ರಕಾರ ಎಲ್ಲ ಪರವಾನಗಿ ಪಡೆದುಕೊಂಡಿದ್ದರು. ಕಳೆದ 6 ತಿಂಗಳಲ್ಲಿ ಇಂತಹದ್ದೇ ಪ್ರತ್ಯೇಕ 3 ಘಟನೆಗಳು ನಡೆದಿದೆ. ನಾವೆಲ್ಲ ಭರತೀಯರಾಗಿದ್ದು ಯಾವುದೇ ರಾಜ್ಯಕ್ಕೆ ತೆರಳಿ ಉದ್ಯೋಗ ಮಾಡಿ ಜೀವನ ನಿರ್ವಹಣೆ ಮಾಡುವ ಎಲ್ಲ ಹಕ್ಕಿದೆ. ಹೀಗಿರುವಾಗ ಗೋವಾದಲ್ಲಿ ಕನ್ನಡಿಗರು ದುಡಿದು ಜೀವನ ಕಟ್ಟಿಕೊಳ್ಳುವುದು ತಪ್ಪೇ…? ಇದು ಭಾರತ ದೇಶದ ಒಂದು ರಾಜ್ತವೇ ಅಲ್ಲವೇ…? ಗೋವಾದಲ್ಲಿ ಕನ್ನಡಿಗರ ಮೇಲೆ ಪದೆ ಪದೆ ದಬ್ಬಾಳಿಕೆ ನಡೆಸುತ್ತಿರುವುದೇಕೆ..? ಎಂದು ಇಲ್ಲಿನ ಕನ್ನಡಗರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹಲ್ಲೆಗೊಳಗಾದ ಅನೀಲ್ ರಾಠೋಡ್ ರವರಿಗೆ ನ್ಯಾಯ ದೊರಕಬೇಕು ಹಾಗೂ ಮುಂದೆ ಇಂತಹ ಘಟನೆ ಎಂದೂ ಕೂಡ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಗೋವಾ ಸರ್ಕಾರದ ಜವಾಬ್ದಾರಿಯಾಗಿದೆ.