ಸುದ್ಧಿಕನ್ನಡ ವಾರ್ತೆ
Goa: ಗೋವಾದ ತಾಂಬಡಿ ಸುರ್ಲಾ ಮಹಾದೇವ ದೇವಸ್ಥಾನವು 13 ನೇಯ ಶತಮಾನದ ಕದಂಬ ಶೈಲಿಯ ಹಿಂದೂ ದೇವಾಲಯವಾಗಿದ್ದು, ಹಿಂದು ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾದ ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಕರ್ನಾಟಕದ ಐಹೊಳೆಯಲ್ಲಿರುವ ದೇವಾಲಯವನ್ನು ನೆನಪಿಸುತ್ತದೆ.
ತಾಂಬಡಿ ಸುರ್ಲಾ ಮಹಾದೇವ ದೇವಾಲಯವು ಕದಂಬ ಶೈಲಿಯ ಬಸಾಲ್ಟನಿಂದ ನಿರ್ಮಿತ ದೇವಾಲಯವಾಗಿದೆ. ಗೋವಾದಲ್ಲಿ ಸಂರಕ್ಷಿಸಲ್ಪಟ್ಟ ಮತ್ತು ಲಭ್ಯವಿರುವ ಬಸಾಲ್ಟ ಕಲ್ಲಿನಲ್ಲಿ ಕದಂಬ ವಾಸ್ತುಶಿಲ್ಪದ ಏಕೈಕ ಮಾದರಿ ಎಂದೇ ಪರಿಗಣಿಸಲಾಗಿದೆ. ಈ ದೇವಾಲಯವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕಾರಣ ಇಸ್ಲಾಮಿಕ್ ಆಕ್ರಮಣಗಳಿಂದ ತಪ್ಪಿ ಉಳಿದಿದೆ.(Tambadi Surla Mahadeva Temple in Goa is a 13th century Kadamba style Hindu temple).
ಗೋವಾದ ತಾಂಬಡಿ ಸುರ್ಲಾ ದೇವಾಲಯವು ಶಿವನಿಗೆ ಅರ್ಪಿತವಾಗಿದ್ದು ನೆರೆಯ ಕರ್ನಾಟಕದ ಐಹೊಳೆಯಲ್ಲಿರುವ ದೇವಾಲಯವನ್ನು ನೆನಪಿಸುತ್ತದೆ. ಗರ್ಭಗುಡಿಯ ಒಳಗಿನ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ನಾಗರಾಜನು ಶಾಶ್ವತವಾಗಿ ನೆಲೆಸಿದ್ದಾನೆ ಎಂದು ಸ್ಥಳೀಯ ದಂತಕಥೆಯಿದೆ. (The Tambadi Surla temple in Goa is reminiscent of the temple at Aihole in neighboring Karnataka).
ಏಕಶಿಲಾಮಯ ದೇವಾಲಯ…
ತಾಂಬಡಿ ಸುರ್ಲಾ ದೇವಾಲಯವು ಗರ್ಭಗುಡಿ, ಮತ್ತು ಬಸಾಲ್ಟನಿಂದ ನಿರ್ಮಿತವಾದ ಕಂಬಗಳ ನಂದಿ ಮಂಟಪವನ್ನು ಒಳಗೊಂಡ ಏಕಶಿಲಾಮಯ ದೇವಾಲಯ ಇದಾಗಿದೆ. ಈ ದೇವಾಲಯದ ಮೇಲ್ಛಾವಣಿಯಿಂದ ಹಿಡಿದು ಸುತ್ತಲೂ ಕೂಡ ಕಲ್ಲಿನಲ್ಲಿ ಸುಂದರ ಕೆತ್ತನೆಯನ್ನು ಕಾಣಬಹುದಾಗಿದೆ. ಸೂರ್ಯೋದಯದ ಮೊದಲ ಕಿರಣವು ಶಿವನ ಮೇಲೆ ಬೀಳುವಂತೆ ಪೂರ್ವಕ್ಕೆ ಮುಖ ಮಾಡಿ ಈ ಏಕಶಿಲಾಮಯ ಕಲ್ಲಿನ ದೇವಾಲಯ ಕೆತ್ತನೆ ಮಾಡಲಾಗಿದೆ. ಗರ್ಭಗುಡಿಯು ಮೂರು ಹಂತದ ಗೋಪುರದಿಂದ ಅಲಂಕರಿಸಲ್ಪಟ್ಟಿದೆ. ಕದಂಬ ಸಾಮ್ರಾಜ್ಯದ ಸಂಕೇತವಾದ ಚಿತ್ರವನ್ನು ನಂದಿ ಮಂಟಪದಲ್ಲಿನ ಕಂಬದ ಬುಡದಲ್ಲಿ ಕೆತ್ತನೆ ಮಾಡಲಾಗಿದೆ.
ಶಿವರಾತ್ರಿ ವಿಶೇಷ…
ಮಹಾಶಿವರಾತ್ರಿಯಂದು ಈ ಏಕಶಿಲಾಮಯ ಮಹಾದೇವ ದೇವಾಲಯಕ್ಕೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಜನರು , ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಜನರು ಅತ್ಯಂತ ಶೃದ್ಧಾಭಕ್ತಿಯಿಂದ ಆಚರಿಸುತ್ತಾರೆ. ಮಹಾ ಶಿವರಾತ್ರಿಯಂದು ತಾಂಬಡಿ ಸುರ್ಲಾ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ.
ದೇವಾಲಯ ತಲುಪುವ ದಾರಿ…
ತಾಂಬಡಿ ಸುರ್ಲಾ ಮಹಾದೇವ ದೇವಾಲಯವು ಗೋವಾ ರಾಜಧಾನಿ ಪಣಜಿಯಿಂದ ಸುಮಾರು 65 ಕಿ.ಮಿ ದೂರದಲ್ಲಿದೆ. ಸತ್ತರಿ ತಾಲೂಕಿನ ವಾಳಪೈ ಪಟ್ಟಣದಿಂದ ದಕ್ಷಿಣಕ್ಕೆ 22 ಕಿ.ಮಿ ದೂರದಲ್ಲಿದೆ. ಭಗವಾನ್ ಮಹಾವೀರ ಅಭಯಾರಣ್ಯ ಮತ್ತು ಮೋಲೆಮ್ ರಾಷ್ಟ್ರೀಯ ಉದ್ಯಾನವನದ ಈಶಾನ್ಯ ಭಾಗದಲ್ಲಿ ನೋಲ್ಕಾರ್ನೆಮ್ ಹಳ್ಳಿಯಿಂದ ಪೂರ್ವಕ್ಕೆ 13 ಕಿ.ಮಿ ದೂರದಲ್ಲಿರುವ ತಾಂಬಡಿ ಸುರ್ಲಾ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ದೇವಾಲಯವು ಗೋವಾವನ್ನು ಕರ್ನಾಟಕ ರಾಜ್ಯಕ್ಕೆ ಸಂಪರ್ಕಿಸುವ ಅನ್ಮೋಡ ಘಾಟ್ ನ ತಪ್ಪಲಿನಲ್ಲಿದೆ.
ಗೋವಾದ ಏಕ ಶಿಲಾಮಯ ಮಹಾದೇವ ದೇವಸ್ಥಾನಕ್ಕೆ ನೀವು ಒಮ್ಮೆ ಭೇಟಿ ನೀಡಿ(You should visit the Ek Shilamaya Mahadev temple in Goa once).