ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಮಳೆಗಾಲ ಆರಂಭದಲ್ಲಿ ನಿರೀಕ್ಷೆಯಂತೆ ಮಳೆಯಾಗದಿದ್ದರೂ ಕೂಡ ಇದೀಗ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಗೋವಾದಲ್ಲಿ ಅಣೇಜಕಟ್ಟುಗಳಲ್ಲಿ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಂಜುಣೆ ಅಣೇಕಟ್ಟು 87.55 ಮೀಟರ್ ತುಂಬಿದೆ. ಮುಂದಿನ ಎರಡು ದಿನಗಳಲ್ಲಿ ಈ ಅಣೇಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದ್ದು ನದಿ ತೀರದಲ್ಲಿರುವ ಗ್ರಾಮಗಳ ಜನತೆ ಎಚ್ಚರಿಕೆ ವಹಿಸುವಂತೆ ಜಲಸಂಪನ್ಮೂಲ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ- ಅಂಜುಣೆ ಅಣೇಕಟ್ಟು 93.20 ಮೀಟರ್ ಸಾಮಥ್ರ್ಯ ಹೊಂದಿದೆ. ಸುಮಾರು 90 ಮೀಟರ್ ಮಟ್ಟಕ್ಕೆ ತಲುಪುತ್ತಿದ್ದಂತೆಯೇ ಹೆಚ್ಚುವರಿ ನೀರನ್ನು ಅಣೇಕಟ್ಟಿನಿಂದ ಬಿಡುಗಡೆ ಮಾಡಲಾಗುವುದು. ಆಮಠಾಣೆ ಅಣೇಕಟ್ಟಿನ ನೀರಿನ ಸಾಮಥ್ರ್ಯ 50 ಮೀಟರ್ ಇದ್ದು ಈಗಾಗಲೇ 49 ಮೀಟರ್ ತುಂಬಿದೆ. ಈ ಅಣೇಕಟ್ಟಿನಿಂದಲೂ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಣೇಕಟ್ಟಿನ ಕೆಳಭಾಗದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಗೋವಾದ ಅಂಜುಣೆ ಅಣೇಕಟ್ಟು ಪ್ರದೇಶದಲ್ಲಿ 2345 ಮಿಲಿಮೀಟರ್ ಮಳೆಯಾಗಿದ್ದು, ಆಮಠಾಣೆ ಅಣೇಕಟ್ಟು ಪ್ರದೇಶದಲ್ಲಿ 1145 ಮಿಲಿ ಈಟರ್ ಮಳೆಯದೆ. ಇದು ಗೋವಾ ರಾಜ್ಯದಲ್ಲಿ ಕುಡಿಯುವ ನೀರು ಮತ್ತು ಇತರ ಅಗತ್ಯಗಳಿಗೆ ತೃಪ್ತಿದಾಯಕವಾಗಿದೆ ಎಂದೇ ಹೇಳಲಾಗುತ್ತಿದೆ. ವದಂತಿಗಳನ್ನು ನಂಬದೆಯೇ ಕಾಲಕಾಲಕ್ಕೆ ಆಡಳಿತವು ನೀಡುವ ಸೂಚನೆಗಳನ್ನು ಪಾಲಿಸುವಂತೆ ಜಲಸಂಪನ್ಮೂಲ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.
ಎಚ್ಚರ ವಹಿಸಿ…
ಅಣೇಕಟ್ಟುಗಳಿಂದ ನೀರು ಬಿಡಲಾಗುತ್ತಿರುವುದರಿಂದ ನದಿಪಾತ್ರದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ನದಿ ದಡದಲ್ಲಿ ಅನಗತ್ಯವಾಗಿ ಓಡಾಡುವುದು, ಜಾನುವಾರುಗಳು ಕೂಡ ಹೋಗದಂತೆ ಎಚ್ಚರ ವಹಿಸಬೇಕು. ವಿಶೇಷವಾಗಿ ನದಿ ಪಾತ್ರದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚು ಎಚ್ಚರ ವಹಿಸುವಂತೆ ಜಲಸಂಪನ್ಮೂಲ ಇಲಾಖೆ ಮನವಿ ಮಾಡಿದೆ.
