ಸುದ್ದಿ ಕನ್ನಡ ವಾರ್ತೆ

ಶಿರಸಿ: ತಾಲೂಕಿನ ಶಿಂಗನಮನೆ ಕಾಡಿನಲ್ಲಿ ಯುವಕನ ಕೊಲೆ ಪ್ರಕರಣ ನಡೆದಿದ್ದು, ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಶುಕ್ರವಾರ ನಗರದ ಡಿವೈಎಸ್‌ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕೊಲೆಯಾದ ವ್ಯಕ್ತಿ ತಾಲೂಕಿನ ಇಟಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಂಗನಮನೆ ನಿವಾಸಿ ಪರಮೇಶ್ವರ ನಾಯ್ಕ (35) ಎಂದು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು.

​ಘಟನೆ ವಿವರ:
ಶಿಂಗನಮನೆಯ ಪರಮೇಶ್ವರ ನಾಯ್ಕ ಎಂಬ ಯುವಕ ಜೂನ್ 25 ಸಂಜೆ 7:45ರ ಸಮಯದಲ್ಲಿ ಯಾರದೋ ಕರೆ ಬಂದ ತಕ್ಷಣ ಮನೆಯಿಂದ ಹೊರಟು ಹೋದವನು ಇದುವರೆಗೂ ಮನೆಗೆ ಬಂದಿರುವುದಿಲ್ಲ ಅವನನ್ನು ಪತ್ತೆ ಮಾಡಿ ಎಂದು ಜೂನ್ 25 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಇ ಆರ್ ಎಸ್ ಎಸ್ ಗೆ ದೂರು ಬಂದ ಹಿನ್ನೆಲೆಯಲ್ಲಿ ಇ ಆರ್ ಎಸ್ ಎಸ್ ತಂಡದವರು ಹಾಗೂ ಶಿರಸಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಪರಿಶೀಲನೆ ನಡೆಸಿದ್ದರು. ಜೂ.26ರ ಬೆಳಗ್ಗೆ ಡಾಗ್ ಸ್ಕ್ವಾಡ್ ಸಮೇತ ಶಿಂಗನಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶಿಂಗನಮನೆಯಿಂದ 200 ಮೀಟರ್ ದೂರದ ಕಾಡಿನಲ್ಲಿ ಕೊಲೆಯಾದ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದರು.

​ಅಲ್ಲದೆ ಶಂಕಿತ ವ್ಯಕ್ತಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಈಗ ಕೊಲೆಗೆ ನಿಖರ ಕಾರಣ ಏನಿರಬಹುದು ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿಸಿದ್ದೇವೆ. ತನಿಖೆಯಲ್ಲಿ ಸತ್ಯ ಬಯಲಾದ ತಕ್ಷಣ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಗೀತಾ ಪಾಟೀಲ, ಸಿಪಿಐ ಸಂಪತ ಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.