Banner Ad

ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದ್ದ ನಿಗೂಢ ನಾಡಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಕಾಳಗಿನಕೊಪ್ಪ ಗ್ರಾಮದ ವಸಂತ ಯಾನೆ ವಾಸು ರಾಯಪ್ಪ ಕೊರವರ ಬಂಧಿತ ಆರೋಪಿ. ಈತನನ್ನು ತಾಂತ್ರಿಕಸಹಾಯ ಮತ್ತು ನಿಖರ ಮಾಹಿತಿ ಆಧಾರದ ಮೇಲೆ ಜೂನ್ 24ರಂದು ಹುಬ್ಬಳ್ಳಿಯ ತಾರಿಹಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
​ಜೂನ್ 22ರಂದು ಮುಂಜಾನೆ 5:10ರ ಸುಮಾರಿಗೆ ಆರೋಪಿ ವಸಂತ ಕೊರವರ ತನ್ನ ಮನೆಯಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಭೀಕರವಾಗಿ ಸ್ಫೋಟಗೊಂಡಿದ್ದವು. ಸ್ಫೋಟದ ತೀವ್ರತೆಗೆ ಆರೋಪಿಯ ಮನೆ, ಮೇಲ್ಛಾವಣಿಯ ಹೆಂಚುಗಳು, ಅವರ ಕೋಣೆಯ ಕಿಟಕಿ ಗ್ಲಾಸುಗಳು ಪುಡಿಯಾಗಿದ್ದವು. ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಮನೆಗಳ ಹೆಂಚು ಮತ್ತು ಬಾಗಿಲುಗಳೂ ಒಡೆದು ಹೋಗಿದ್ದು, ಸುಮಾರು 1,15,000 ರೂಪಾಯಿಯಷ್ಟು ಆಸ್ತಿ ನಷ್ಟ ಸಂಭವಿಸಿತ್ತು. ಘಟನೆ ಬಗ್ಗೆ ಕಸಬಾಠಾಣೆ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. ಎಫ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Banner Ad

​ಎಸ್‌ಪಿ ದೀಪನ್ ಎಂ.ಎನ್., ಡಿವೈಎಸ್‌ಪಿ ಕೃಷ್ಣಮೂರ್ತಿ ಹಾಗೂ ಧಾರವಾಡ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕಸಬಾಠಾಣೆ ಸಿಪಿಐ ಜಯಪಾಲು ಪಾಟೀಲ ನೇತೃತ್ವದಲ್ಲಿ ಧಾರವಾಡ, ಕಸಬಾಠಾಣೆ ಮತ್ತು ಉಪನಗರೆ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

​ಬಂಧಿತ ಆರೋಪಿಯನ್ನು ಧಾರವಾಡದ ಜೆ.ಎಂ. ಮತ್ತು ಜೆ.ಎಫ್.ಎಂ.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Banner Ad