ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ; ಹಿಂದೂ ಹವ್ಯಕ ಬ್ರಾಹ್ಮಣರಲ್ಲಿ ಹೆಣ್ಣುಮಕ್ಕಳ ಕೊರತೆಯಿಂದಾಗಿ ಗಂಡುಮಕ್ಕಳ ವಿವಾಹಕ್ಕೆ ತೊಂದರೆಯಾಗುತ್ತಿದ್ದುದರಿಂದ ಉತ್ತರ ಭಾರತ ದಿಂದ ಬ್ರಾಹ್ಮಣ ಹೆಣ್ಣುಮಕ್ಕಳನ್ನು ತಂದು ಇದುವರೆಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಹತ್ತಾರು ವಿವಾಹ ನೆರವೇರಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ವಿವಾಹ ಮಾಡಿಸುವುದನ್ನು ಕೆಲವರು ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡು ಹವ್ಯಕ ಗಂಡುಮಕ್ಕಳ ಮನೆಯಿಂದ ಹಣದ ಸುಲಿಗೆ ಮಾಡುತ್ತಿರುವುದು ಖೇದಕರ ಸಂಗತಿಯೇ ಆಗಿದೆ.
ಹವ್ಯಕ ಬ್ರಾಹ್ಮಣರು ಯಾರೂ ಕೂಡ ಇದುವರೆಗೂ ಅಂತರ್ಜಾತಿ ವಿವಾಹ ಮಾಡಿಕೊಂಡಿಲ್ಲ. ಮದುವೆಯಾಗಲು ಹವ್ಯಕ ಹೆಣ್ಣುಮಕ್ಕಳು ಸಿಗದಿದ್ದಾಗ ಮದುವೆಯಾಗದೆಯೇ ಹಾಗೆಯೇ ಉಳಿದಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಇಂತಹ ಸಂದರ್ಭವನ್ನೇ ನಮ್ಮಲ್ಲಿ ಕೆಲವರು ಬಳಸಿಕೊಂಡು ಹಣ ಮಾಡುವ ಮುಖ್ಯ ಉದ್ಯೋಗಕ್ಕೆ ಇಳಿದಂತೆ ಕಂಡುಬರುತ್ತಿದೆ. ಮೇಲ್ನೋಟಕ್ಕೆ ಕೇಳಿದರೆ ತಾವು ಸೇವೆ ಮಾಡುವವರಂತೆ ಪೋಸ್ ಕೊಡುವ ಇವರ ನಿಜವಾದ ಬಣ್ಣ ತಿಳಿದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಸದ್ಯಕ್ಕೆ ಇಂತವರ ಹೆಸರು ಹೇಳುವುದು ತಪ್ಪು ಎಂದೆನಿಸಿದರೂ ಕೂಡ ಮುಂಬರುವ ದಿನಗಳಲ್ಲಿ ಇಂತಹ ಮುಖವಾಡ ಕಳಚಿ ಬಯಲಿಗೆಳೆಯುವ ದಿನ ದೂರ ಉಳಿದಿಲ್ಲ.
ಮಗನಿಗೆ ಮದುವೆಗಾಗದಿದ್ದಾಗ ಏನಾದರೂ ಮಾಡಿ ಉತ್ತರ ಭಾರತದಿಂದಲಾದರೂ ಹವ್ಯಕ ಹೆಣ್ಣನ್ನು ತಂದು ಮದುವೆ ಮಾಡೋಣ ಎಂದು ಕನಸು ಕಾಣುವ ಪಾಲಕರೇ ಇವರ ಟಾರ್ಗೇಟ್. ಒಂದು ವೇಳೆ ಉತ್ತರಭಾರತದ ಯಾರನ್ನಾದರೂ ಸಂಪರ್ಕಿಸಿ ಕಷ್ಟುಪಟ್ಟು ಹೆಣ್ಣು ನಿಕ್ಕಿ ಮಾಡಿದರೂ ಕೂಡ ಅದಕ್ಕೂ ಕೂಡ ನಮಗೆ ಗೊತ್ತಿಲ್ಲದ ಹಾಗೆಯೇ ಕಮೀಶನ್ ಕೊಡುವಂತೆ ಮಾಡುವ ಜನರು ನಮ್ಮಲ್ಲೇ ಇದ್ದಾರೆ.
ಇಂತಹ ಕಮೀಶನ್ ಏಜೆಂಟ್ ಗಳು ಉತ್ತರ ಭಾರತದಿಂದ ಹೆಣ್ಣು ಗಂಡು ಮಾತುಕತೆಗೆ ಯಲ್ಲಾಪುರಕ್ಕೆ ಬಂದಿದ್ದಾರೆ ಎಂದು ಗೊತ್ತಾದರೂ ಸಾಕು ಅವರನ್ನು ಎಲ್ಲಿಯಾದರೂ ಹೇಗಾದರೂ ಮಾಡಿ ಭೇಟಿ ಮಾಡಿ ಮಾಣಿಯ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಮದುವೆಗೆ ವಿಘ್ನ ಒಡ್ಡುತ್ತಾರೆ. ಇಲ್ಲವಾದರೆ ತಾನು ಏನೂ ಕಷ್ಟಪಡದಿದ್ದರೂ ಕೂಡ ತನಗೆ ಕುತ್ತಲ್ಲಿಯೇ ಕಮೀಷನ್ ಬರುವಂತೆ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಸರಿಯೇ..? ಮದುವೆಯ ಮಾತುಕತೆಗೆ ಬಂದ ಹೆಣ್ಣಿನ ಬದಿಯವರನ್ನು ಅವರ ದಾರಿ ತಪ್ಪಿಸಿ ತಮ್ಮ ಮನೆಗೆ ಕರೆದೊಯ್ದು ಆ ಮದುವೆಯಲ್ಲಿ ತನಗೂ ಕಮೀಷನ್ ಬರುವಂತೆ ಮಾಡಿಕೊಳ್ಳುತ್ತಿದ್ದಾರೆ.
ಸುದ್ಧಿಕನ್ನಡ ವಾಹಿನಿಯು ಇದೀಗ ಇಂತಹವರನ್ನು ಪತ್ತೆಹಚ್ಚಲು ಮುಂದಾಗಿದ್ದು ಹವ್ಯಕರಿಗೆ ಮೋಸ ಮಾಡುತ್ತಿರುವವರ ಹೆಸರು ದಾಖಲೆಯ ಸಮೇತ ಕೆಲವೇ ದಿನಗಳಲ್ಲಿ ಸುದ್ಧಿ ಪ್ರಕಟವಾದರೂ ಆಶ್ವರ್ಯವಿಲ್ಲ.
