ಸುದ್ಧಿಕನ್ನಡ ವಾರ್ತೆ
ಪ್ರವಾಸಿಗರೇ ಎಚ್ಚರ…ಗೋವಾ ಬೀಚ್ ಗಳಲ್ಲಿ ಮಧ್ಯ ಸೇವಿಸಿದರೆ ಅದು “ಅವ್ಯವಸ್ಥೆಯ ನಡವಳಿಕೆ” ಎಂದು ಪರಿಗಣಿಸಿ 50,000 ರೂ ಗಳ ವರೆಗೆ ದಂಡ ವಿಧಿಸಿ ಗೋವಾ ಸರ್ಕಾರ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಿದೆ. ಹೌದು ಇಂತದ್ದೊಂದು ಚರ್ಚೆ ಗೋವಾ ವಿಧಾನಸಭೆಯಲ್ಲಿ ನಡೆದಿದೆ.

ಗೋವಾ ಕಡಲತೀರಗಳಲ್ಲಿ ಮದ್ಯದ ಬಾಟಲಿಗಳು ಒಡೆದು ಗಾಯಗೊಳ್ಳುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಗೋವಾ ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಅವರು ಬೀಚ್‍ನಲ್ಲಿ ಮದ್ಯ ಸೇವಿಸುವುದರಿಂದ ಈಗ 5,000 ರಿಂದ 50,000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಮತ್ತು ಅದನ್ನು ‘ಅವ್ಯವಸ್ಥೆಯ ನಡವಳಿಕೆ’ ಎಂದು ಪರಿಗಣಿಸಲಾಗುತ್ತದೆ ಎಂದು ಘೋಷಿಸಿದರು.

ಕಲಂಗುಟ್ ಶಾಸಕ ಮೈಕೆಲ್ ಲೋಬೊ ಅವರು, “ಪ್ರವಾಸಿಗರು ಮದ್ಯಪಾನ ಮಾಡಿ ಸಮುದ್ರಕ್ಕೆ ಹೋಗುತ್ತಾರೆ, ಬಾಟಲಿಗಳನ್ನು ಒಡೆಯುತ್ತಾರೆ ಮತ್ತು ಇತರ ಪ್ರವಾಸಿಗರಿಗೆ ಈ ತುಂಡುಗಳು ತಗುಲಿದಾಗ ಗಂಭೀರವಾಗಿ ಗಾಯಗೊಳ್ಳುತ್ತಾರೆ” ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಯೂರಿ ಅಲೆಮಾಂವ ಅವರು ಪ್ಲಾಸ್ಟಿಕ್ ಮತ್ತು ಮದ್ಯ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್-“ಬೀಚ್‍ನಿಂದ 50 ಮೀಟರ್ ದೂರದಲ್ಲಿರುವ ವೈನ್ ಅಂಗಡಿಯು ಬಿಯರ್ ಬಾಟಲಿಗಳ ಬದಲಿಗೆ ‘ಕ್ಯಾನ್‍ಗಳಲ್ಲಿ’ ಮದ್ಯವನ್ನು ಪೂರೈಸುವುದನ್ನು ಪರಿಗಣಿಸುತ್ತಿದೆ. ಪ್ರವಾಸಿಗರು ಸಮುದ್ರದಲ್ಲಿ ಬಾಟಲಿಗಳನ್ನು ಒಡೆಯುತ್ತಾರೆ, ಆದ್ದರಿಂದ ಕ್ಯಾನ್‍ಗಳ ಆಯ್ಕೆಯನ್ನು ಪರಿಗಣಿಸಲಾಗುತ್ತಿದೆ.” ಮೈಕೆಲ್ ಲೋಬೊ ಈ ಪ್ರಸ್ತಾವನೆಯನ್ನು ಸಿಎಂ ಬೆಂಬಲಿಸಿದ್ದಾರೆ ಮತ್ತು ಇದನ್ನು ಕಾನೂನಿನಲ್ಲಿ ಕಡ್ಡಾಯಗೊಳಿಸಬಹುದೇ ಎಂದು ನೋಡಲು ಅಧ್ಯಯನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.