ಸುದ್ದಿ ಕನ್ನಡ ವಾರ್ತೆ
ಸಕಲೇಶಪುರ : ಇಲ್ಲಿನ ಓಂ ಮಂದಿರದಲ್ಲಿ ಸಕಲೇಶಪುರ ತಾಲ್ಲೂಕು ಮಟ್ಟದ ದೇವಸ್ಥಾನ ವಿಶ್ವಸ್ಥರ, ಅರ್ಚಕರ ಮತ್ತು ದೇವಸ್ಥಾನ ಕ್ಷೇತ್ರದಲ್ಲಿ ಹೋರಾಟ ಮಾಡುವವರಿಗಾಗಿ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಸಕಲೇಶಪುರ, ಚಿಕ್ಕಮಗಳೂರು, ಬೇಲೂರು ಸೇರಿದಂತೆ ಅನೇಕ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದರು. ದೇವಸ್ಥಾನಗಳ ಸಂಘಟನೆಗಾಗಿ ಈ ಅಧಿವೇಶನದ ಆಯೋಜನೆಯನ್ನು ಮಾಡಲಾಗಿತ್ತು. ದೀಪ ಪ್ರಜ್ವಲನೆ ಹಾಗೂ ವೇದಮಂತ್ರ ಪಥಾನದೊಂದಿಗೆ ಅಧಿವೇಶನದ ಶುಭಾರಂಭ ಮಾಡಲಾಯಿತು.
ನಮ್ಮ ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಬದಲಾಗಿ ಚೈತನ್ಯದ ಸ್ರೋತ ಹಾಗೂ ಪ್ರೇರಣಾ ಸ್ಥಾನಗಳು ! – ಶ್ರೀ. ಚಂದ್ರ ಮೊಗವೀರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕರ್ನಾಟಕ
ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರ ಮಾತ್ರವಲ್ಲ ಅವು ನಮಗೆ ಪ್ರೇರಣೆ ನೀಡುವ ಪ್ರೇರಣಾ ಕೇಂದ್ರ. ನಮ್ಮ ದೇವಸ್ಥಾನಗಳನ್ನು ಸರಕಾರವು ವಹಿಸಿಕೊಂಡು ಹಣವನ್ನು ಲೂಟಿ ಮಾಡುತ್ತಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ 21 ಕೋಟಿ 80 ಲಕ್ಷ ಅವ್ಯವಹಾರವಾಗಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ರಿಪೋರ್ಟ್ ನಲ್ಲಿ ಹೇಳಿದ್ದಾರೆ. ಅಲ್ಲಿಯ ಜಿಲ್ಲಾಧಿಕಾರಿಗಳ ಮನೆಯ ಫೋನ್ ಬಿಲ್ ಕಟ್ಟಲು ದೇವಸ್ಥಾನದ ಹಣವನ್ನು ಬಳಕೆ ಮಾಡಲಾಗಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಳೆದ ದೀಪಾವಳಿಯ ಸಂದರ್ಭದಲ್ಲಿ ಗಮನಕ್ಕೆ ಬಂದಿರುವುದನ್ನು ಪ್ರಸ್ತಾಪಿಸಿ ಸರಕಾರೀಕರಣದ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು ಹಾಗೂ ಇದರ ವಿರುದ್ಧ ಹೋರಾಡಲು ಕರೆ ನೀಡಿದರು.
ನಾವೆಲ್ಲಾ ಹಿಂದೂಗಳಲ್ಲಿ ಸಾಮರಸ್ಯತೆ ಮತ್ತು ಏಕತೆ ಇದ್ದರೆ ಎಂತಹ ಸಮಸ್ಯೆ ಬಂದರೂ ನಾವು ಎದುರಿಸಬಹುದು. ಪ್ರತಿ ಮನೆ ಮನೆಗೂ ಹೋಗಿ ಹಿಂದೂ ಧರ್ಮದ ಪ್ರಸಾರ ಮಾಡಿ ವಾರಕೊಮ್ಮೆಯಾದರೂ ದೇವಸ್ಥಾನಕ್ಕೆ ಬಂದು ಧರ್ಮಶಿಕ್ಷಣ ಪಡೆಯಲು ಪ್ರೇರಣೆ ನೀಡಬೇಕು` ಎಂದರು.
ಶ್ರೀ. ಭಾಸ್ಕರ್ ನಾಯ್ಡು, ವಿಶ್ವಸ್ಥರು, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಸಕಲೇಶಪುರ
ಅರ್ಚಕರು ಧರ್ಮರಕ್ಷಣೆಗೆ ಕೈ ಜೋಡಿಸಬೇಕು ! – ಶ್ರೀ ರಘು, ಪ್ರಖರ ಹಿಂದೂ ಮುಖಂಡರು, ಸಕಲೇಶಪುರ*
ಭಕ್ತಾದಿಗಳಲ್ಲಿ ಅರ್ಚಕರ ಮೇಲೆ ವಿಶ್ವಾಸ ಇರುವುದರಿಂದ ಅವರು ಭಕ್ತಾದಿಗಳಿಗೆ ಧರ್ಮಶಿಕ್ಷಣ ಕೊಟ್ಟು ಹಿಂದೂ ಧರ್ಮಕ್ಕೆ ಏನೇನು ಆಘಾತವಾಗುತ್ತಿದೆ, ವಿಡಂಬನೆಯಾಗುತ್ತಿದೆ, ವಿಗ್ರಹ ಬಂಜನೆಯಾಗುತ್ತಿದೆ ಇದರ ಅರಿವು ಮೂಡಿಸಬೇಕು. ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಅರ್ಚಕರು ಭಕ್ತಾದಿಗಳು ಮಾಡಿರುವ ತ್ಯಾಗ ಬಲಿದಾನಗಳ ಅರಿವು ಇಂದಿನ ಯುವಕ-ಯುವತಿಯರಿಗೆ ಮೂಡಿಸಬೇಕು. ಕೇವಲ ತೀರ್ಥ, ಪ್ರಸಾದಕ್ಕೆ ಅವರ ಕರ್ತವ್ಯ ಸೀಮಿತವಾಗಬಾರದು` ಎಂದರು.
ಪ್ರತಿದಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವ ಸಂಸ್ಕಾರವಾಗಬೇಕು, ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಕ್ತಾದಿಗಳಿಗೆ ನಾಮಜಪ, ದೇವರ ಕಥೆಗಳನ್ನು ಹೇಳಿ ಅವರಿಗೆ ಪ್ರತಿನಿತ್ಯ ದೇವಸ್ಥಾನಕ್ಕೆ ಬರುವ ವಾತಾವರಣ ನಿರ್ಮಾಣ ಮಾಡಬೇಕು ! – ಶ್ರೀ. ಮಂಜುನಾಥ್, ಕಾರ್ಯದರ್ಶಿಗಳು, ಶ್ರೀ ಹೊಳೆ ಮಲ್ಲೇಶ್ವರ ದೇವಸ್ಥಾನ, ಸಕಲೇಶಪುರ
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರಶೇಖರ್ ಮಾತನಾಡಿ, `ದೇವಸ್ಥಾನಗಳ ಮೂಲಕ ಧರ್ಮಶಿಕ್ಷಣ ನೀಡಿದಾಗ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ ಗಾಢವಾಗುವುದು ಮತ್ತು ಇದರಿಂದ ಭಕ್ತನು ಉತ್ತಮ ಧರ್ಮಾಚರಣಿಯಾಗಿ ಧರ್ಮರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಗೆ ಬದ್ಧನಾಗುತ್ತಾನೆ` ದೇವಸ್ಥಾನಗಳಲ್ಲಿ ಧರ್ಮಾಚರಣೆಯ ಕುರಿತ ಗ್ರಂಥಗಳು ಉಪಲಬ್ಧವಾಗುವಂತೆ ಗ್ರಂಥಾಲಯಗಳನ್ನು ಮಾಡುವುದರಿಂದ ಭಕ್ತರಿಗೆ ಧರ್ಮದ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ. ಹಿಂದೂಗಳಲ್ಲಿ ಧರ್ಮಶಿಕ್ಷಣ ಇಲ್ಲದ ಕಾರಣ ಇಂದು ಅನೇಕರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿ ಮಂದಿರಗಳು ಜವಾಬ್ದಾರಿ ತೆಗೆದುಕೊಂಡು ಧರ್ಮಶಿಕ್ಷಣವನ್ನು ನೀಡಬೇಕು. ಧರ್ಮರಕ್ಷಣೆಗಾಗಿ ದೇವಸ್ಥಾನಗಳ ವಿಶ್ವಸ್ಥರು ಸಂಘಟಿತರಾಗಿ ಕಾರ್ಯ ಮಾಡಬೇಕಾಗಿದೆ` ಎಂದರು.
ಈ ಅಧಿವೇಶನದಲ್ಲಿ ದೇವಸ್ಥಾನಗಳಲ್ಲಿ ಸಾಪ್ತಾಹಿಕ ಧರ್ಮಶಿಕ್ಷಣ ವರ್ಗ ಪ್ರಾರಂಭಿಸಲು ನಿಶ್ಚಯಿಸಲಾಯಿತು. ಸುಮಾರು 20 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಇದರೊಂದಿಗೆ ಹಿಂದೂ ಸಮಾಜವನ್ನು ಸಂಘಟಿಸಲು ಸಾಮೂಹಿಕ ಆರತಿ ಉಪಕ್ರಮವನ್ನು ನಡೆಸಲು ದೇವಸ್ಥಾನಗಳ ವಿಶ್ವಸ್ಥರು ಸಿದ್ದರಾದರು.