ಪಣಜಿ: ಗೋವಾದ ಮಡಗಾಂವ್‍ನಿಂದ ಬಾಂದ್ರಾಕ್ಕೆ ಮಂಗಳವಾರದಿಂದ ರೈಲು ಸಂಚಾರ ಆರಂಭವಾಗಿದೆ. ಸಚಿವ ಅಲೆಕ್ಸ್ ಸಿಕ್ವೇರಾ, ಶಾಸಕ ದಿಗಂಬರ ಕಾಮತ್, ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ರೈಲಿಗೆ ಚಾಲನೆ ನೀಡಲಾಯಿತು. ಈ ರೈಲಿನಿಂದಾಗಿ ಕೊಂಕಣ ರೈಲ್ವೇ ಪಶ್ಚಿಮ ರೈಲ್ವೆಗೆ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಕಾಮತ್ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಅಲೆಕ್ಸ್ ಸಿಕ್ವೇರಾ, ಶಾಸಕ ಕಾಮತ್, ಶಾಸಕ ಉಲ್ಲಾಸ್ ತುಯೇಕರ್, ಮೇಯರ್ ದಾಮೋದರ ಶಿರೋಡ್ಕರ್, ಕೊಂಕಣ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಬನ್ ಘಾಟ್ಗೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಗೋವಾದಿಂದ ಪಶ್ಚಿಮ ರೈಲ್ವೆ ಮಾರ್ಗವನ್ನು ಸಂಪರ್ಕಿಸುವ ಮೊದಲ ರೈಲ್ವೆ ಇದಾಗಿದೆ ಎಂದು ಘಾಟ್ಗೆ ಹೇಳಿದರು. ಮಾಗಾರ್ಂವ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.40 ಕ್ಕೆ ಹೊರಟು ಅದೇ ದಿನ ಬಾಂದ್ರಾ ತಲುಪಲಿದೆ. ರೈಲು ಪ್ರತಿ ಮಂಗಳವಾರ ಮತ್ತು ಗುರುವಾರ ಮಡಗಾಂವ್‍ನಿಂದ ಮತ್ತು ಪ್ರತಿ ಬುಧವಾರ ಮತ್ತು ಶುಕ್ರವಾರ ಬಾಂದ್ರಾದಿಂದ ಹೊರಡಲಿದೆ. ಈ ರೈಲು ಮಡಗಾಂವ್ ಜೊತೆಗೆ ಕರಮಳಿ ಮತ್ತು ಥಿವಿ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪಶ್ಚಿಮ ರೈಲ್ವೆ ಸಂಪರ್ಕ ಕಲ್ಪಿಸುವ ರೈಲು ಕೊಂಕಣ ರೈಲು ಮಾರ್ಗದಿಂದ ಆರಂಭವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ದಿಗಂಬರ್ ಕಾಮತ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ರೈಲ್ವೆ ಸುಧಾರಣೆಗೆ ಗಮನ ಹರಿಸುತ್ತಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಪ್ರಯಾಣಿಕರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.