ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಇಡಗುಂದಿ, ಕೊಡ್ಲ ಗದ್ದೆ, ರಾಮನ ಗುಳಿ, ಹೆಗ್ಗಾರ್, ಮಾರ್ಗವಾಗಿ ಅತ್ಯಂತ ಕೆಳಮಟ್ಟದಲ್ಲಿ ಬುಧವಾರ ಮಧ್ಯಾಹ್ನ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಎಂಬಂತೆ ಈ ಭಾಗದಲ್ಲಿ ವಿಮಾನ ಅತೀ ಕಳಮಟ್ಟದಲ್ಲಿ ಹಾರಾಟ ನಡೆಸಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈ ವೈಮಾನಿಕ ಸಮೀಕ್ಷೆಯು ಖನಿಜ ಸಂಪನ್ಮೂಲಗಳ ಸಮೀಕ್ಷೆಗೆ ಸಂಬಂಧಿಸಿದಾಗಿದೆ ಎಂದು ಹೇಳಲಾಗುತ್ತಿದ್ದರೂ ಕೂಡ ನದಿ ಜೋಡಣೆ ಯೋಜನೆಯ ಸಮೀಕ್ಷೆಯು ಆಗಿರಬಹುದು ಎಂದು ಹಲವರ ಅಭಿಪ್ರಾಯವಾಗಿದೆ.
ಕಳೆದ ಕೆಲ ದಿನಗಳಿಂದ ಯಲ್ಲಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಲೇ ಇದೆ. ಜನರಿಗ ಬೇಡವಾದ, ಜನ ವಿರೋಧಿ ಯೋಜನೆಯ ಮತ್ತೊಂದು ಭಾಗ ಇದಾಗಿರಬಹುದು ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಈ ವೈಮಾನಿಕ ಸಮೀಕ್ಷೆಯು ಗಂಗಾವಳಿ, ಬೇಡ್ತಿ ನದಿಯ ಅಕ್ಕ ಪಕ್ಕದಲ್ಲಿಯೇ ನಡೆಯುತ್ತಿದೆ. ಈ ನದಿಗಳ ಸುತ್ತಮುತ್ತಲೇ ವಿಮಾನ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿದೆ. ವಿಮಾನವು ಇತರ ಭಾಗಕ್ಕೆಲ್ಲೂ ಹೋಗುತ್ತಿಲ್ಲ. ಅಂದಮೇಲೆ ಇದು ಯಾವ ಸಮೀಕ್ಷೆ….? ಜನರನ್ನು ತಪ್ಪು ದಾರಿಗೆ ಎಳೆಯಲು ಸಮಜಾಯಿಸಿ ನೀಡಲಾಗುತ್ತಿದೆಯೇ….? ಎಂದು ಕೂಡ ತಿಳಿಯರು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆ ಪ್ರತಿ ದಿನ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
