ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಇಲ್ಲಿನ ಮಾಗೋಡು ಕ್ರಾಸ್ ನಲ್ಲಿ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಕಪ್ಪು ಚಿರತೆಯೊಂದು ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಈ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕುಗಳಿಸಿದ್ದಾರೆ. ಕಪ್ಪು ಚಿರತೆ ಸಾವಿಗೆ ಕಾರಣವಾದ ವಾಹನ ಯಾವುದು ಎಂಬ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ಆಗಮಿಸುತ್ತಿವೆ. ಚಿರತೆ, ಹುಲಿ, ಕಾಡುಕೋಣ, ಕಾಡು ಹಂದಿ ಮುಂತಾದ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿವೆ. ಕಪ್ಪು ಬಣ್ಣದ ಚಿರತೆ ಅಪರೂಪದ ಚಿರತೆಯಾಗಿದ್ದು, ಈ ಚಿರತೆಯ ಸಾವು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ರಾತ್ರಿಯ ವೇಳೆ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.