ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಜಾರಿಗೆ ಸರ್ಕಾರವು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಇತ್ತ ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ರಾಜೀನಾಮೆಗೆ ಆಘ್ರಹ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಜೀವನದಿಗಳ ರಕ್ಷಣೆಗೆ ಯಾವುದೇ ಒಗ್ಗಟ್ಟಿನ ಹೋರಾಟ ನಡೆಸದೇ ಇರುವ ಕಾರಣ ಹಾಗೂ ಈ ಯೋಜನೆ ಸ್ಥಗಿತಗೊಳಿಸುವ ಕುರಿತ ಮಾತು ಉಳಿಸಿಕೊಳ್ಳಲು ವಿಫಲರಾದ ಕಾರಣ ಜನಪ್ರತಿನಿಧಿಗಳ ರಾಜೀನಾಮೆಗೆ ಸೋಶಿಯಲ್ ಮೀಡಿಯಾದಲ್ಲಿ ಆಘ್ರಹ ವ್ಯಕ್ತವಾಗುತ್ತಿದೆ.

ಉತ್ತರಕನ್ನಡದ ಜನತೆ ಈಗಾಗಲೇ ಹಲವು ಯೋಜನೆಗಳ ಜಾರಿಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನೀಡಲು ಕೂಡ ಸರ್ಕಾರದಿಂದ ಸಾಧ್ಯವಾಗಿಲ್ಲ. ಜನತೆಗೆ ಬೇಕು ಎಂಬ ಯೋಜನೆ ನೀಡಲು ಸಾಧ್ಯವಾಗದ ಸರ್ಕಾರ, ಜನತೆಗೆ ಬೇಡ ಎಂಬ ಜನವಿರೋಧಿ ಯೋಜನೆಗಳ ಜಾರಿಗೆ ಮುಂದಾಗಿದೆ. ನದಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೋರಾಟಗಳು ಮುಂದುವರೆದಿದೆ.

ನದಿ ತಿರುವು ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ನವೆಂಬರ್ 3 ರಂದು ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಜನವಿರೋಧಿ ಯೋಜನೆ ಸ್ಥಗಿತಗೊಳಿಸಲು ಜಿಲ್ಲೆಯ ಜನಪ್ರತಿನಿಧಿಗಳಿಗೆ 15 ದಿನಗಳ ಗಡುವು ನೀಡಲಾಗಿತ್ತು. ಆದರೆ ಈ ಹದಿನೈದು ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಏನೇನು ಮಾಡಿದರು…? ಏನೂ ಮಾಡಿಲ್ಲ. ಇಷ್ಟಾದರೂ ಕೂಡ ಅವರವರ ಬೆಂಬಲಿಗರು ಮಾತ್ರ ಅವರನ್ನು ಜೋಲುತ್ತಲೇ ಇದ್ದಾರೆಯೇ ಹೊರತು ಅವರಿಗೆ ಇದ್ಯಾವ ಯೋಜನೆಗೆಗಳ ಕಲ್ಪನೆಯೂ ಕೂಡ ಇದ್ದಂತೆ ಕಂಡುಬರುತ್ತಿಲ್ಲ.

ಜನಪ್ರತಿನಿಧಿಗಳ ಕಾರ್ಯಕ್ರಮ ಬಹಿಷ್ಕಾರ ಹಾಕಿದರೆ ಅವರ ಬೆಂಬಲಿಗರು ಹಣ ಕೊಟ್ಟಾದರೂ ಎಲ್ಲಿಂದಲಾದರೂ ಜನರನ್ನು ಕರೆಯಿಸುತ್ತಾರೆ. ಇದರಿಂದಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಜನರು ಎದುರಿಗೆ ಬಂದು ರಾಜೀನಮೆ  ಕೇಳುವ ಮೊದಲೇ ತಮ್ಮ ರಾಜೀನಾಮೆ ನೀಡಬೇಕು ಎಂಬ ಆಘ್ರಹ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಜನಪ್ರತಿನಿಧಿಗಳು ರಾಜಿನಾಮೆ ನೀಡಿದರೆ ಸರ್ಕಾರದ ಮೇಲೆ ಜನವಿರೋಧಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚು ಒತ್ತಡ ಬೀಳಲು  ಸಾಧ್ಯವಾಗುತ್ತದೆ ಅಲ್ಲವೇ…?

ತಮ್ಮ ಜವಾಬ್ದಾರಿಯನ್ನು ಅರಿತು ಜನಪ್ರತಿನಿಧಿಗಳು ಕೂಡಲೇ ರಾಜೀನಾಮೆಗೆ ಮುಂದಾಗ್ತಾರಾ..?ಕಾದು ನೋಡಬೇಕಿದೆ.