ಸುದ್ದಿ ಕನ್ನಡ ವಾರ್ತೆ
ಹೊಸಪೇಟೆ:ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಜ್ಞಾನ, ಯಶಸ್ಸು ಹಾಗೂ ಸಂಸ್ಕಾರವನ್ನು ಹೊಂದಲು ಭಗವದ್ಗೀತೆಯ ಅಧ್ಯಯನ ಅತ್ಯಂತ ಹೆಚ್ಚು ಮಹತ್ವದ್ದಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಶ್ರದ್ಧೆ, ತತ್ಪರತೆ ಹಾಗೂ ಇಂದ್ರಿಯ ಸ೦ಯಮ ಎಂಬ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಜ್ಞಾನಾರ್ಜನೆಯೊಂದಿಗೆ ಶೈಕ್ಷಣಿಕ ಸಾಧನೆಯನ್ನೂ ಮಾಡಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಹೊಸಪೇಟೆಯ ಸಂಡೂರು ರಸ್ತೆಯಲ್ಲಿರುವ ನಿವೇದಿತಾ ಶಾಲೆಯ ವಿದ್ಯಾರ್ಥಿ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಧ್ಯಾತ್ಮಿಕ ಶ್ರೇಷ್ಠತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತು ಗೌರವಿಸಲು ನಮ್ಮ ಪ್ರಮುಖ ಧರ್ಮಗ್ರಂಥಗಳ ಅಧ್ಯಯನವೇ ಎಂದು. ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ದೇಶದ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹೀಗಾಗಿ ಭಗವದ್ಗೀತೆಯನ್ನು ಓದಬೇಕು. ವಿಶೇಷವಾಗಿ ಮಕ್ಕಳು ಬಾಲ್ಯದಿಂದಲೇ ಗೀತೆಯ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿನ ‘ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ’ ಎಂಬ ಶ್ಲೋಕವು ವಿದ್ಯಾರ್ಥಿ ಜೀವನಕ್ಕೆ ಅತ್ಯಂತ ಮಹತ್ವದ ಮೂರು ಸೂತ್ರಗಳನ್ನು ನೀಡಲಾಗಿದೆ.ಶೃದ್ಧೆ ,ತತ್ಪರತೆ ಮತ್ತು ಇಂದ್ರಿಯ ಸಂಯಮವನ್ನು ಪಡೆದವರಿಗೆ ಜ್ಞಾನ ಪ್ರಾಪ್ತಿ ಎಂದು ವಿವರಿಸಿದರು. ನಿವೇದಿತಾ ಶಾಲೆಯ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಕಂಠಪಾಠ ಮಾಡಿ ಪಠಿಸುವಲ್ಲಿ ವಿಶೇಷ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ಅಮೆರಿಕದಿಂದ ಭಾರತಕ್ಕೆ ಬಂದು ಸ್ವಾಮಿ ವಿವೇಕಾನಂದರ ಪ್ರಭಾವದಿಂದ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿ ದೇಶಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ಸಹೋದರಿ ನಿವೇದಿತಾ ಅವರ ಆದರ್ಶದಂತೆ ಶಾಲೆಯು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಶ್ರದ್ಧೆಯನ್ನು ಬೆಳೆಸುತ್ತಿರುವ ಸಂತಸದ ಸಂಗತಿ ಎಂದರು.
ಭಗವದ್ಗೀತೆಯ ಅಧ್ಯಯನವು ಕೇವಲ ಶಾಲಾ ಹಂತಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿ ಜೀವನದ ನಂತರವೂ ಪ್ರತಿಯೊಬ್ಬರ ಬದುಕಿನಲ್ಲಿ ಗೀತೆಯ ಅಧ್ಯಯನ ಹಾಗೂ ಅದರ ಬೋಧನೆಗಳು ನಿರಂತರವಾಗಿ ಮುಂದುವರಿಯಬೇಕು. ಇದರಿಂದ ವ್ಯಕ್ತಿಯ ಜೀವನ ಜ್ಞಾನಯುಕ್ತವಾಗಿ, ಮೌಲ್ಯಯುತವಾಗಿ ರೂಪುಗೊಳ್ಳಲು ಸಾಧ್ಯ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಶಾಲೆಯ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
