ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾರದೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪಾಲಕರು,ಪೋಷಕರು,ಶಿಕ್ಷಕರು ಮಕ್ಕಳು ಸೇರಿ ಮಾಡಿದ ಅಲಂಕೃತ ಮಂಟಪದಲ್ಲಿ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿ,ಭಾವದಿಂದ ಪೂಜೆ ಆರತಿ,ಭಜನೆಯನ್ನು ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ,ಪಾಲಕರಿಗೆ,ಪೋಷಕರಿಗೆ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಧ್ಯಾಹ್ನ ಅನ್ನಪ್ರಸಾದ ಸೇವೆಯನ್ನು ಪಾಲಕರು,ಪೋಷಕರು, ಊರಿನ ಗ್ರಾಮಸ್ಥರು ಮಾಡಿದ್ದರು. ಯುವತಿಯರು,ಮಹಿಳೆಯರಿಂದ ಪುಗುಡಿ ನೃತ್ಯದ ಜೊತೆ ಹಾಡುಗಳು,ಮಕ್ಕಳು,ಯುವಕರು,ಪುರುಷರಿಂದ ಆರತಿ, ಭಜನಾ ಕಾರ್ಯಕ್ರಮಗಳು ನಡೆದವು.ಶ್ರೀ ದೇವಿಯ ಫಲಪಲಾವಳಿಗಳ ಸವಾಲ್ ನಡೆಯಿತು.ಸವಾಲ್ ಕಾರ್ಯಕ್ರಮದ ಶ್ರೀ ದೇವಿಯ ಪ್ರಥಮ ಸವಾಲ್ ಪ್ರಸಾದವನ್ನು ಶಾಲೆಯ ಹಳೆಯ ವಿದ್ಯಾರ್ಥಿಯಾದ ಸಂಜಯ ದತ್ತಾ ದೇಸಾಯಿ ಸ್ವೀಕರಿಸಿದರು. ಶ್ರೀ ದೇವಿಯ ಕೊನೆಯ ಸವಾಲ್ ಪ್ರಸಾದವನ್ನು ಶಾಲೆಯ ಹಳೆಯ ವಿದ್ಯಾರ್ಥಿಯಾದ ಪ್ರಶಾಂತ ಚಂದ್ರಕಾಂತ ದೇವದಾಸ ಸ್ವೀಕರಿಸಿದರು.ಸವಾಲ್ ಕಾರ್ಯಕ್ರಮವನ್ನು ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ರಾಜು ವೇಳಿಪ ನಿರ್ವಹಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಬೀರಪ್ಪ ಉರ್ಮಿ ಅವರ ಮಾರ್ಗದರ್ಶನ, ಅತಿಥಿ ಶಿಕ್ಷಕರಾದ ರತ್ನಾಕರ ತೆಲೋಲಿಕರರವರ ಸಹಕಾರದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೋಮಣ್ಣ ವೇಳಿಪ, ಉಪಾಧ್ಯಕ್ಷರಾದ ಸುದೇಶ ಸಾವಂತ,ಸದಸ್ಯರಾದ ಗಜಾನನ ವೇಳಿಪ,ಗಣೇಶ ವೇಳಿಪ, ಸದಾನಂದ ದೇವದಾಸ, ಶ್ರೀಕಾಂತ ಮಿರಾಶಿ,ಬಾಲಚಂದ್ರ ವೇಳಿಪ,ಕಿರಣ ಶೇಟಕರ, ಸರ್ವ ಸದಸ್ಯರು,ಬಿಸಿಯೂಟ ಅಡುಗೆಯವರು,ಅಂಗನವಾಡಿ ಕಾರ್ಯಕರ್ತೆ,ಸಹಾಯಕಿ,ಪಾಲಕರು, ಪೋಷಕರು ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಹಿರಿಯರು, ಮಾತೆಯರು, ಗಣ್ಯರು,ಶಿಕ್ಷಣ ಪ್ರೇಮಿಗಳು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಒಟ್ಟಿನಲ್ಲಿ ಅವುರ್ಲಿ ಗ್ರಾಮದ ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅವುರ್ಲಿ ಸೋಮೇಶ್ವರ ದೇವಸ್ಥಾನದ ಮುಕ್ತೇಸರ ಮೋಹನ ದೇಸಾಯಿ, ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಸದಸ್ಯರಾದ ಧವಳೋ ಗಣೇಶ ಸಾವರ್ಕರ, ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯ್ಕ,ಶಾಲೆಯ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜು ವೇಳಿಪ,ಪ್ರೀತಿನಂದ ಶೇಟಕರ, ರುಕ್ಮಿಣಿ ವೇಳಿಪ,ನಾರಾಯಣ ವೇಳಿಪ,ಶ್ರೀಕೃಷ್ಣ ವೇಳಿಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾದರು.
ವಿವಿಧ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತ ಅಂಗನವಾಡಿ ಮಕ್ಕಳಿಗೆ,ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ,ಮಹಿಳೆಯರಿಗೆ,ಪುರುಷರಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಬಹುಮಾನ ವಿತರಿಸಿದರು. ಆಟೋಟ ಸ್ಪರ್ಧೆಗಳ ಆಯೋಜನೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಉತ್ತಮ ಸಹಕಾರ ನೀಡಿದರು. ನಂತರ ಕೊನೆಯಲ್ಲಿ ಶ್ರೀ ಶಾರದಾ ದೇವಿಯ ಮೂರ್ತಿಯ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
