ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಿಕ್ಷಕರು,ಪಾಲಕರು,ವಿದ್ಯಾರ್ಥಿಗಳು ನಾಡ ದೇವಿಯಾದ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಕನ್ನಡ ನಾಡಿನ ಭಾಷೆ, ನೆಲ, ಜಲ, ಕನ್ನಡ ಸಾಹಿತ್ಯ, ಸಂಸ್ಕೃತಿಯ, ಕರ್ನಾಟಕ ಏಕೀಕರಣ,ಕನ್ನಡ ರಾಜ್ಯೋತ್ಸವದ ಹಿನ್ನೆಲೆ,ಮಹತ್ವ, ಆಚರಣೆಯ ವಿಷಯದ ಕುರಿತು ಮಾತನಾಡಿದರು. ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಮಾತನಾಡುತ್ತಾ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಶುಭಾಶಯವನ್ನು ಕೋರುತ್ತಾ ಕನ್ನಡ ನಾಡು, ನುಡಿ, ನೆಲ,ಜಲವನ್ನು ಗೌರವಿಸುತ್ತಾ,ಕನ್ನಡತನ ಉಳಿಯಬೇಕಾದರೆ ಕನ್ನಡ ಭಾಷೆಯನ್ನು ದಿನನಿತ್ಯ ಜೀವನದಲ್ಲಿ ಬರೆಯುವುದು, ಓದುವುದು,ಕನ್ನಡ ಭಾಷೆಯಲ್ಲಿ ಮಾತನಾಡುವುದು,ಕನ್ನಡ ಸಂಸ್ಕೃತಿಯನ್ನು ನಾವು ನಿವೇಲ್ಲರೂ ಸೇರಿ ಬೆಳೆಸೋಣ ಎಂದು ಕರೆ ನೀಡಿದರು.

ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು.