ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಲ್ಲಿ ನವರಾತ್ರಿ ಮಹೋತ್ಸವದ ಅಂಗದ ನಿಮಿತ್ತ ಘಟಸ್ಥಾಪನೆಯ ದಿನದಿಂದ ದುರ್ಗಾಮಾತಾ ದೌಡಗೆ ಚಾಲನೆ ನೀಡಲಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಉತ್ಸಾಹದಿಂದ ನಡೆಯುತ್ತಿದೆ.
ದುರ್ಗಾಮಾತಾ ದೌಡದಲ್ಲಿ ಯುವಕರು, ಯುವತಿಯರು,ಹಿರಿಯರು ಹಾಗೂ ಚಿಕ್ಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಎರಡನೇ ದಿನವೂ ಯುವಜನತೆ ಉತ್ಸಾಹದಿಂದ ಭಾಗವಹಿಸಿ, ದುರ್ಗಾಮಾತೆಯ ಆರಾಧನೆಗೆ ಮತ್ತಷ್ಟು ಮೆರಗು ತಂದಿದ್ದಾರೆ.
ದುರ್ಗಾಮಾತಾ ದೌಡನ್ನು ಸ್ವಾಗತಿಸಲು ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮನೆಗಳ ಮುಂಭಾಗದ ರಸ್ತೆಗಳನ್ನು ಸ್ವಚ್ಛಗೊಳಿಸಿ, ನೀರು ಹಾಕಿ, ಸುಂದರ ರಂಗೋಲಿಗಳನ್ನು ಬಿಡಿಸಿ, ಕೇಸರಿ ಧ್ವಜಗಳು ಹಾಗೂ ತೋರಣಗಳಿಂದ ಅಲಂಕರಿಸಲಾಗಿದೆ. ಗ್ರಾಮಸ್ಥರ ಭಕ್ತಿಪೂರ್ವಕ ಸ್ವಾಗತದಿಂದ ಇಡೀ ಪರಿಸರ ಕೇಸರಿಮಯವಾಗಿ ಕಂಗೊಳಿಸಿದೆ.
ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳು ಶಿವಾಜಿ ಮಹಾರಾಜರ ಶೌರ್ಯವನ್ನು ಸಾರುವ ಪೋಷಾಕುಗಳನ್ನು ಹಾಕಿ, ಜೈಘೋಷಗಳನ್ನು ಮೊಳಗಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.ಯುವಜನತೆಯ ಉತ್ಸಾಹ ಹಾಗೂ ಗ್ರಾಮಸ್ಥರ ಸಹಕಾರ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.
ಪ್ರತಿ ವರ್ಷದ ಸಂಪ್ರದಾಯದಂತೆ ದಸರಾ ಉತ್ಸವದವರೆಗೆ ಜೋಯಿಡಾದ ವಿವಿಧ ಗಲ್ಲಿಗಳಲ್ಲಿ ದುರ್ಗಾಮಾತಾ ದೌಡ ಮುಂದುವರಿಯಲಿದ್ದು, ದುರ್ಗಾಮಾತೆಯ ಆರಾಧನೆಯೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯನಡೆಯಲಿದೆ.
ದುರ್ಗಾಮಾತಾ ದೌಡನ್ ಮೂಲಕ ಜೋಯಿಡಾದಲ್ಲಿ ಭಕ್ತಿ, ಶ್ರದ್ಧೆ ಮತ್ತು ಯುವಶಕ್ತಿಯ ಸಂಗಮ ಅನಾವರಣಗೊಂಡಿದೆ.
