ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಕಳಚೆ ಸಹ್ಯಾದ್ರಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಪ್ರಸಕ್ತ ವರ್ಷದ 2025 26 ನೇ ಸಾಲಿನ ಲೆಕ್ಕಪತ್ರಗಳಲ್ಲಿ ದೃಢೀಕರಣ ದಾಖಲೆಗಳಿಲ್ಲದ ಮೊತ್ತವನ್ನು ನಮೂದಿಸಿರುವ ಕುರಿತು ಸಂಘದ ಕೆಲ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಿ ಸಂಘದ ಏರುದಾರಿಗೆ ಸಮಗ್ರ ಆರ್ಥಿಕ ಚಿತ್ರಣವನ್ನು ಒದಗಿಸಬೇಕು ಎಂದು ಬೆಂಗಳೂರಿನ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕಳಚೆ ಸಹ್ಯಾದ್ರಿ ಸಂಘದ ನಿರ್ದೇಶಕರುಗಳಾದ ಸೂರ್ಯನಾರಾಯಣ ಸಾಂಬ ಭಟ್, ಗಜಾನನ ಭಟ್, ಶ್ರೀಪಾದ ಶಿವರಾಮ ಗಾಂವ್ಕರ್ , ಶ್ರೀನಾಥ ತಮ್ಮಯ್ಯ ಹೆಗಡೆ ಹಾಗೂ ಅರುಣ್ ಗುರುನಾಥ ನಾಯಕ್ ರವರು ಈ ಕುರಿತಂತೆ ಮನವಿ ಸಲ್ಲಿಸಿದ್ದಾರೆ.

ಆ. 26ರಂದು ಸಂಘದ 2025 26 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಡಾವೇ ಪತ್ರಿಕೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾದ ಶೇಕಡ ಮೂರರಷ್ಟು ಪೋಸ್ ಪ್ರೋತ್ಸಾಹಧನ 5,13,227, ಕೇಂದ್ರ ಸರ್ಕಾರದ ಶೇಕಡ ಎರಡರಷ್ಟು ಬಡ್ಡಿ ಸಹಾಯಧನ ರೂ 2, 02817, ರಾಜ್ಯ ಸರ್ಕಾರದಿಂದ ಬರಬೇಕಿದ್ದ ಬಡ್ಡಿ 23, 10,285, ಹಾಗೂ ಕೆಡಿಸಿಸಿ ಬ್ಯಾಂಕ್ ನಿಂದ ಬರಬೇಕಿದ್ದ ಬಡ್ಡಿ ರೂ 1854,674, ಎಂದು ನಮೂದಿಸಿರುವುದು ಬೆಳಕಿಗೆ ಬಂದಿದೆ.

ಈ ಸಭೆಯಲ್ಲಿ ಈ ಮೊತ್ತಗಳಿಗೆ ಸಂಬಂಧಿಸಿದ ದೃಢೀಕರಣ ಪತ್ರಗಳು ಇಲ್ಲದಿರುವ ಕುರಿತು ಸಂಘದ ಹಲವು ತಿರುದಾರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೆ ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿಯೂ ಹಲವು ನಿರ್ದೇಶಕರು ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಪೈಕಿ 7 ಲಕ್ಷ ಸಂಘದ ಖರ್ಚಿಗೆ ಹಾಕಿ ಮಂಜೂರಿ ಪಡೆಯಲು ಮುಂದಾಗಿರುವುದಕ್ಕೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. 2003 ರಿಂದಲೇ ಗಡಿ ಕರಣ ಪತ್ರಗಳಿಲ್ಲದ ಮೊತ್ತಗಳನ್ನು ಇದೇ ರೀತಿಯಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ದೃಢೀಕರಣ ಪತ್ರಗಳನ್ನು ಪರಿಶೀಲಿಸದೆಯೇ ದಾಖಲೆಗಳಲ್ಲಿಲ್ಲದೆ ಮೊತ್ತಗಳನ್ನು ಲಾಭದಲ್ಲಿ ಅನುಮತಿಸುವುದು ಸರಿಯಾದ ಕ್ರಮವಲ್ಲ ಎಂದು ಹಲವು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ವಿಷಯವನ್ನು ಮರೆಮಾಚಿ ಲೆಕ್ಕದಲ್ಲಿ ಮುಂದುವರಿಸುವುದು ಕಾನೂನು ಸಮ್ಮತ ಹಾಗೂ ನ್ಯಾಯ ಸಮ್ಮತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.