ಸುದ್ದಿ ಕನ್ನಡ ವಾರ್ತೆ

ಶಿರಸಿ:ಚುನಾವಣೆ ಸಮಯದಲ್ಲಿ ಮತದಾರರಂತೆ ಕಾಣುತ್ತಾರೆ . ಚುನಾವಣೆ ಮುಗಿದ ನಂತರ ಅತಿಕ್ರಮಣ ದಾರದಂತೆ ಕಾಣುತ್ತಾರೆ. ಕಾಂಗ್ರೆಸ್ ಗೆ ಮತ ನೀಡಿದ ತಪ್ಪಿಗೆ ಅವರು ನೀಡುವ 2 ಸಾವಿರ ರೂಪಾಯಿ ತೆಗೆದುಕೊಂಡು ರಸ್ತೆಯಲ್ಲಿ ನಿಲ್ಲಬೇಕೇ? ಗೆಜೆಟ್ ನೋಟಿಫೀಕೆಶನ್ ಆಗಿ ಒಂದು ವರ್ಷ ಕಳೆದರೂ ಸಹ ಸ್ಥಳೀಯ ಶಾಸಕರು ಯಾಕೆ ಮೌನ ವಹಿಸಿದ್ಧಾರೇ? ಅವರದ್ದೂ ಸಹಮತ ವಿದೆಯಾ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ .

ತಾಲೂಕಿನ ದೇವನಳ್ಳಿಯಲ್ಲಿ ಅತಿಕ್ರಮಣ ಹಾಗೂ ಗಾಂವಠಾಣ ಜಾಗದಲ್ಲಿರುವ ಮನೆ–ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ರಾಜ್ಯ ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ರೋಗ ಬಾಧೆಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡುವ ಬದಲು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಜನರ ಮನೆ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹಲವು ಕುಟುಂಬಗಳು 30ರಿಂದ 40 ವರ್ಷಗಳಿಂದ ಮನೆಗಳಿಗೆ ತೆರಿಗೆ ಪಾವತಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮನೆ ನಂಬರ್ ಹಾಗೂ ಇ-ಸ್ವತ್ತು ದಾಖಲೆಗಳನ್ನು ರದ್ದುಪಡಿಸುವ ಕ್ರಮ ಸರಿಯಲ್ಲ. ಈ ವಿಚಾರದಲ್ಲಿ ಸ್ಥಳೀಯ ಶಾಸಕರು ಏಕೆ ಮಾತನಾಡುತ್ತಿಲ್ಲ. ಜನರ ಹಕ್ಕು ಕಸಿಯುವಲ್ಲಿ ಅವರೂ ಪಾಲುದಾರರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ವಸತಿ ರಹಿತರಿಗೆ ಸೂಕ್ತ ರೀತಿಯಲ್ಲಿ ಮನೆಗಳನ್ನು ಒದಗಿಸದ ಕಾಂಗ್ರೆಸ್ ಸರ್ಕಾರ, ಇದೀಗ ಸಾವಿರಾರು ಮನೆಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ರಾಜ್ಯದಿಂದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ಕಾಂಗ್ರೆಸ್ ನ ಪಾಪದ ಕೂಸು,ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲಾಗಿದೆ. ಈಗ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಸಿಸುವುದು ಸರಿಯಾದ ಕ್ರಮವಲ್ಲ ಎಂದರು.

ಹೋರಾಟದ ಸಂಚಾಲಕ ಹಾಗೂ ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅರಣ್ಯ ಹಾಗೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಅನೇಕ ಕುಟುಂಬಗಳು ಪಂಚಾಯತದಿಂದ ಮನೆ ನಂಬರ್ ಪಡೆದು, ತೆರಿಗೆ ಪಾವತಿಸಿ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಜೀವನ ಕಟ್ಟಿಕೊಂಡಿವೆ. ಇಂತಹ ಕುಟುಂಬಗಳ ದಾಖಲೆಗಳನ್ನು ಏಕಾಏಕಿ ರದ್ದುಪಡಿಸುವುದು ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಕ್ರಮಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇವರು ಮತದಾರರಾಗುತ್ತಾರೆ; ನಂತರ ಅವರನ್ನು ಅತಿಕ್ರಮಣದಾರರು ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ ನಮ್ಮ ಮನೆ ನಂಬರ್ ಉಳಿಯಬೇಕು ಎಂದು ಹೋರಾಟ ಮಾಡುತ್ತಿದ್ದೇವೆ .ಎಲ್ಲ ಪಂಚಾಯತ್ ಗಳಲ್ಲೂ ಹೋರಾಟ ನಡೆಯುತ್ತಿದೆ . ನಮ್ಮ ಮನೆ ನಂಬರ್ ಉಳಿಯಬೇಕು. ಮನೆ ನಂಬರ್ ಇಲ್ಲದಿದ್ದರೆ ರೇಷನ್ ಕಾರ್ಡ್ , ಆಧಾರ್ ಕಾರ್ಡ್ ಸಿಗುವುದಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ .ಮನೆ ನಂಬರ್ ಇಲ್ಲದಿದ್ದರೆ ನಾವು ಶಾಶ್ವತ ವಾಗಿ ಬೀದಿಯಲ್ಲಿ ಇರಬೇಕಾಗುತ್ತದೆ .ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅತಿಕ್ರಮಣ ದಾರರಿಗೆ ಈ ಹಿಂದೆ ಬಿಜೆಪಿ ಸರಕಾರ ಹೆಚ್ಚಿನ ಮನೆ ಗಳನ್ನು ನೀಡಿತ್ತು. ಆದರೆ ಇಂದಿನ ಸರಕಾರ ಎಷ್ಟು ಮನೆಗಳನ್ನು ನೀಡಿದೆ? ಮನೆಗಳಿಗೆ ಹಣವನ್ನು ನೀಡಿಲ್ಲ ಎಂದು ಆರೋಪಿಸಿದರು.ಏಪ್ರಿಲ್ ನಲ್ಲಿ ಅಧಿವೇಶನದಲ್ಲಿ ಚರ್ಚೆ ಆಗಬೇಕಾದರೇ ಸ್ಥಳೀಯ ಶಾಸಕರು ಏನು ಮಾಡುತ್ತಿದ್ದರು? ಚಾ ಬಿಸ್ಕತ್ ತಿನ್ನಲು ಹೋಗಿದ್ರಾ , ಜನರಿಗೆ ತೊಂದರೆ ಆಗುತ್ತದೆ ಎಂದು ಗೊತ್ತಾಗಲಿಲ್ಲವೇ?ಕಾಯಿದೆ ಮಾಡುವಾಗಲೇ ವಿರೋಧಮಾಡಲು ಆಗಲಿಲ್ಲವೇ ಎಂದು ಪ್ರಶ್ನಿಸಿದರು .ಬಿಜೆಪಿ ಸದಾ ಬಡವರ ಪರವಾಗಿದೆ . ಮನೆ ನಂಬರ್ ಉಳಿಯುವ ತನಕ ನಮ್ಮ ಹೋರಾಟ ನಿರಂತರ ವಾಗಿರಲಿದೆ ಎಂದರು .

ದೇವನಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಮರಾಠಿ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡುವ ಬದಲು ಅರ್ಹರಿಗೆ ಹಕ್ಕುಪತ್ರ ನೀಡಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು. ಹಲವು ವರ್ಷಗಳಿಂದ ತೆರಿಗೆ ಪಾವತಿಸಿ ಪಂಚಾಯತ ದಾಖಲೆ ಹೊಂದಿರುವ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಮ ಸರಿಯಲ್ಲ. ಆದೇಶವನ್ನು ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ಸರ್ಕಾರದ ಆದೇಶ ಜಾರಿಯಾದರೆ ಅತಿಕ್ರಮಣ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸುದರ್ಶನ ದಿವಾಕರ, ಸುನೀಲ ಹೆಗಡೆ, ದಾಮೋದರ ಸಿದ್ದಿ,ರವಿ ಗಾಂವ್ಕರ್, ಸುನೀಲ್ ಭಟ್ , ನಿರ್ಮಲಾ ಶೆಟ್ಟಿ ಪಕ್ಷದ ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹಲವರು ಇದ್ದರು.