ಸುದ್ದಿ ಕನ್ನಡ ವಾರ್ತೆ

ಶಿರಸಿ: ಜಿಲ್ಲೆಯಾದ್ಯಂತ ಎದುರಾಗುತ್ತಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಗರದಲ್ಲಿ ಬಿಎಸ್‌ಎನ್‌ಎಲ್ ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಬೋರಾಲೇ ಹೇಮಂತ್ ಸದಾಶಿವ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

​ಸಭೆಯಲ್ಲಿ ಮಾತನಾಡಿದ ಸಂಸದರು, ರಾಜ್ಯದಲ್ಲೇ ಅತಿ ಹೆಚ್ಚು ಬಿಎಸ್‌ಎನ್‌ಎಲ್ ಟವರ್‌ಗಳು ಇರುವ ಜಿಲ್ಲೆ ಉತ್ತರ ಕನ್ನಡ. ಅವುಗಳ ನಿರ್ವಹಣೆ ಹಾಗೂ ಹೊಸ ಟವರ್‌ಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗುತ್ತಿರುವ ತೊಡಕುಗಳನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಟವರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದ ಅವರು, ಪ್ರತಿ ತಿಂಗಳಿಗೊಮ್ಮೆ ಕಾಮಗಾರಿ ಹಾಗೂ ನಿರ್ವಹಣೆ ಕುರಿತು ಸಮಗ್ರ ವರದಿ ನೀಡುವಂತೆ ಆದೇಶ ನೀಡಿದರು.

​ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಕ್ಷಣವೇ ಸರಿಪಡಿಸಲು ಅಗತ್ಯವಿರುವ ತಂತ್ರಜ್ಞರು ಮತ್ತು ಯಂತ್ರೋಪಕರಣಗಳು ಜಿಲ್ಲೆಯಲ್ಲೇ ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಇನ್ನೂ ಅನೇಕ ಟವರ್‌ಗಳು 4ಜಿ ಉನ್ನತೀಕರಣಗೊಳ್ಳಬೇಕಿದ್ದು, ಅದಕ್ಕೆ ಬೇಕಾಗುವ ಸಲಕರಣೆಗಳನ್ನು ತಕ್ಷಣವೇ ತರಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ ಸಂಸದರು, ಈ ಸಂಬಂಧ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತ್ರವಲ್ಲದೆ ಈಗಾಗಲೇ ಬೆಂಗಳೂರು ಮತ್ತು ನವದೆಹಲಿಯ ಉನ್ನತ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

​ಇದಲ್ಲದೆ, ‘4ಜಿ ಸ್ಯಾಚುರೇಶನ್’ ಯೋಜನೆಯಡಿ ನಿರ್ಮಾಣವಾಗಿರುವ ಟವರ್‌ಗಳಿಗೆ ಕೂಡಲೇ ಡ್ರೈವ್ ಟೆಸ್ಟ್ ನಡೆಸಿ, ಸಿಗ್ನಲ್ ಕೊನೆಯ ಹಂತದವರೆಗೂ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಸ್ಥಳದಲ್ಲೇ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಸಾರ್ವಜನಿಕರ ಸಮಸ್ಯೆಗಳು ತಮ್ಮ ಗಮನದಲ್ಲಿದ್ದು, ಉನ್ನತ ಮಟ್ಟದ ನೆಟ್‌ವರ್ಕ್ ಸೇವೆ ಲಭ್ಯವಾಗುವವರೆಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರಗತಿ ಪರಿಶೀಲನೆ ನಡೆಸುವುದಾಗಿ ಇದೇ ವೇಳೆ ಕಾಗೇರಿ ಸ್ಪಷ್ಟಪಡಿಸಿದರು.