ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ತಾಲೂಕಿನ ವಿವಿದೆಡೆಯಲ್ಲಿ ಪ್ರತಿವರ್ಷವೂ, ಕರಡಿ, ಧಾಳಿ, ಚಿರತೆ, ಧಾಳಿ ನಡೆಯುತ್ತಲೇ ಇದೆ ನಂತರ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ, ಆದರೆ ಇದು ನಡೆಯದಂತೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮುಂದುವರಿದಿರುವ ನಡುವೆಯೇ, ಒಂದೇ ವಾರದ ಅವಧಿಯಲ್ಲಿ ಇಬ್ಬರ ಮೇಲೆ ಕರಡಿ ದಾಳಿ ನಡೆಸಿರುವ ಘಟನೆಗಳು ವರದಿಯಾಗಿವೆ. ಭಾಮಣಗಿ ಹಾಗೂ ಫಣಸೋಳಿ ಗ್ರಾಮಗಳಲ್ಲಿ ನಡೆದ ಈ ಘಟನೆಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.
ಭಾಮಣಗಿ ಗ್ರಾಮದಲ್ಲಿ ಹೊಲದ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ಕಚ್ಚಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಫಣಸೋಳಿ ಗ್ರಾಮದಲ್ಲಿಯೂ ಕರಡಿ ದಾಳಿ ನಡೆದಿದೆ. ರವಿವಾರ ಸಂಜೆ ದನ ಮೇಯಿಸುತ್ತಿದ್ದ ಅಪ್ಪು ಪಿಂಗಳೆ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಕರಡಿಯಿಂದ ತಪ್ಪಿಸಿಕೊಳ್ಳಲು ಅವರು ಧೈರ್ಯದಿಂದ ಪ್ರತಿರೋಧಿಸಿ, ಕರಡಿಯೊಂದಿಗೆ ಸೆಣಸಾಡಿ ಅದನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಜೋರಾಗಿ ಕೂಗಿಕೊಂಡಾಗ ಸ್ಥಳೀಯರು ಧಾವಿಸಿ ಗಾಯಗೊಂಡಿದ್ದ ಅಪ್ಪು ಪಿಂಗಳೆ ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಅಗತ್ಯ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದೆಡೆ, ಕಾಡಂಚಿನ ಗ್ರಾಮಗಳಲ್ಲಿ ಕರಡಿ ದಾಳಿಗೆ ಜನರು ಪ್ರತಿವರ್ಷವೂ ತುತ್ತಾಗುತ್ತಿರುವುದು ಕಂಡು ಬರುತ್ತಿದೆ.
ಒಟ್ಟಾರೆ ಚಿರತೆ ಕರಡಿ ಗಳ ಹಾವಳಿ ಕುರಿತು ಕಾಡಂಚಿನ ಗ್ರಾಮಗಳ ಜನರು ಎದುರಿಸುತ್ತಿರುವ ಅಪಾಯದ ಕುರಿತು ಜಾಗೃತಿ ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಅಗತ್ಯವಿದೆ ಎಂದು ಹೇಳಲಾಗುತ್ತಿದ್ದು, ಈ ಪ್ರಾಣಿ ಗಳ ಹಾವಳಿ ತಡೆಯಲು, ಪ್ರತ್ಯೇಕ ಗಸ್ತು ತಂಡ ರಚಿಸುವ ಮಾಲಕ ಅರಣ್ಯ ಇಲಾಖೆ, ಕ್ರಮ ಕೈಕೊಳ್ಳ ಬೇಕಾಗಿದೆ.
