ಸುದ್ದಿ ಕನ್ನಡ ವಾರ್ತೆ
​ಗೋಕರ್ಣ: ನೀರು ಪ್ರಾಣಿಗಳ ಪ್ರಾಣವೇ ಆಗಿದ್ದು, ಸಂಸ್ಕೃತದಲ್ಲಿ ನೀರಿಗೆ ‘ಜೀವನ’ ಎಂಬ ಪರ್ಯಾಯ ಪದವಿದೆ. ದೇವರು ನೀಡಿದ ಅಮೃತ ಸಮಾನ ಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿ ವಿಷವಾಗಿಸಿದೆ, ಅದರ ಮಹತ್ವವನ್ನು ಅರಿತು ಬಳಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

​ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಸೆ. 6ರಂದು ‘ಅನ್ನ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿ ಮಾತನಾಡಿದ ಅವರು, ಪ್ರಾಚೀನರ ನೀರನ್ನು ನೆಲದೊಳಗಿನ ನೀರು ಹಾಗೂ ನೆಲ ಮುಟ್ಟದ ನೀರು ಎಂದು ಪ್ರಮುಖವಾಗಿ ವಿಂಗಡಿಸಿ, ವಿವಿಧ ನೀರಿನ ಗುಣ ಹಾಗೂ ಪರಿಣಾಮಗಳನ್ನು ವಿಶ್ಲೇಷಿಸಿದ್ದರು. ಇಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿ ಕುಡಿಯುವುದರಿಂದ ನೀರಿನ ಜೊತೆಗೆ ಪ್ಲಾಸ್ಟಿಕ್‌ನ ಅಂಶವೂ ದೇಹ ಸೇರುವ ಸಾಧ್ಯತೆಯಿದ್ದು, ಇದು ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಆಧುನಿಕ ವಿಜ್ಞಾನವೂ ಹೇಳುತ್ತದೆ ಎಂದರು.

​ನೀರು ರಾಜಸ ಮತ್ತು ತಾಮಸ ಗುಣಗಳನ್ನು ನಿಯಂತ್ರಿಸುವುದರ ಜೊತೆಗೆ ಹೃದಯಕ್ಕೆ ಬಲ ನೀಡುತ್ತದೆ. ನೀರಿಗೆ ರುಚಿ, ಬಣ್ಣಗಳಿಲ್ಲದಿದ್ದರೂ ಅದರದ್ದು ಅಮೃತ ರಸ. ನೀರಿನ ಕುರಿತು ಆಯುರ್ವೇದದಲ್ಲಿ ಅಪಾರ ಸಂಶೋಧನೆ ನಡೆದಿದ್ದು, ಅದನ್ನು ಅನುಸರಿಸುವ ಅಗತ್ಯವಿದೆ ಎಂದರು.
​ರಾಜಸ ಮತ್ತು ತಾಮಸ ಕಾರ್ಯಗಳನ್ನು ಮಾಡುವವರಿಗೆ ಅನುಗುಣವಾಗಿ ರಾಜಸ, ತಾಮಸ ಆಹಾರ ಸೇವನೆಗೆ ಭಾರತೀಯ ಪರಂಪರೆ ಅವಕಾಶ ಕಲ್ಪಿಸಿದೆ. ಕ್ಷತ್ರಿಯರಿಗೆ ಯುದ್ಧದಂತಹ ಕಾರ್ಯಗಳಿದ್ದ ಕಾರಣ ಅವರಿಗೆ ವಿಭಿನ್ನ ಆಹಾರ ಪದ್ಧತಿಯನ್ನು ಸೂಚಿಸಲಾಗಿದೆ. ಎಲ್ಲರಿಗೂ ಒಂದೇ ಆಹಾರ ಪದ್ಧತಿಯ ಬದಲಾಗಿ ಅವರ ಗುಣ ಮತ್ತು ಕರ್ಮಗಳಿಗೆ ಅನುಗುಣವಾಗಿ ಆಹಾರವನ್ನು ಭಾರತೀಯ ಪರಂಪರೆ ಸೂಚಿಸಿದೆ ಎಂದು ಹೇಳಿದರು.

​​ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ವಿಜಯನಗರ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ ಹಾಗೂ ಬನಶಂಕರಿ ಹವ್ಯಕ ವಲಯಗಳ ಪರವಾಗಿ ದತ್ತಾತ್ರೇಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೊಣಂದೂರು ಪ್ರಕಾಶ, ಅನುರಾಧ ಪಾರ್ವತಿ, ಡಾ. ವೈ.ವಿ. ಕೃಷ್ಣಮೂರ್ತಿ, ಗುರೂರಾಜ ಪಡೀಲು ಹಾಗೂ ದಿನಪ್ರಧಾನರಾಗಿ ಸಿ.ಎಸ್. ಗೋಪಾಲಕೃಷ್ಣ ಹೆಗಡೆ ಹುಕ್ಕುಮಕ್ಲಿ ದಂಪತಿಗಳು ಉಪಸ್ಥಿತರಿದ್ದರು.