Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಅರಬೈಲ್ ಘಟ್ಟದ ಶಿರಲೆ ಕ್ರಾಸ್ ಬಳಿ ಮಿನಿಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತವಾಗಿ 10 ಜನರು ಗಾಯಗೊಂಡ ಘಟನೆ ನಡೆದಿದೆ.

Banner Ad

​ಕೆಎಸ್‌ಆರ್‌ಟಿಸಿ ಬಸ್ ಭಟ್ಕಳದಿಂದ ರಾಯಭಾಗಕ್ಕೆ ಹೊರಟಿತ್ತು. ಅರಬೈಲ್ ಘಟ್ಟದ ತಿರುವಿನಲ್ಲಿ ಹೋಗುವಾಗ ವೇಗವಾಗಿ ಎದುರಿನಿಂದ ಮಿನಿಬಸ್ ಬಂದಿದ್ದು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಚಾಲಕ ಬಸ್ ಅನ್ನು ರಸ್ತೆ ಪಕ್ಕದ ಗಟಾರಕ್ಕೆ ಇಳಿಸಿದ್ದಾನೆ. ಆದರೂ ಬಸ್‌ನ ಹಿಂಭಾಗಕ್ಕೆ ಮಿನಿಬಸ್ ಡಿಕ್ಕಿ ಹೊಡೆದಿದೆ. ಮಿನಿಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲ ಮಹಾರಾಷ್ಟ್ರದ ಪುಣೆಯವರಾಗಿದ್ದು, ಗೋಕರ್ಣಕ್ಕೆ ಪ್ರವಾಸಕ್ಕೆಂದು ಹೊರಟಿದ್ದರು.

​10 ಪ್ರಯಾಣಿಕರು ಗಾಯಗೊಂಡಿದ್ದು, ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಮಹಿಳೆಯ ಕೈ ಮುರಿದಿದೆ. ಮಿನಿಬಸ್ ಚಾಲಕ ಹಾಗೂ ಮತ್ತೊಬ್ಬ ಪ್ರಯಾಣಿಕನ ಮೈಯೊಳಗೆ ಗಾಜುಗಳು ಹೊಕ್ಕಿ, ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮರಳಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಅಪಘಾತದಿಂದಾಗಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ವಾಹನಗಳ ತೆರವಿಗೆ ಕ್ರಮ ಕೈಗೊಂಡರು.

Banner Ad