ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026- 27 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್. ಸಿ. ಸಿ, ಎನ್.ಎಸ್.ಎಸ್. ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

 

ಜೋಯಿಡಾ ತಹಶೀಲ್ದಾರರಾದ ಮಂಜುನಾಥ ಮುನ್ನೊಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಆ ಮೂಲಕ ಸರ್ವತೋಮುಖ ಪ್ರಗತಿಯನ್ನು ಹೊಂದಬೇಕು ಎಂದು ತಿಳಿಸಿದರು. ಜೊತೆಗೆ ಇತ್ತೀಚಿನ ಎಸ್ ಐ ಆರ್ ಕಾರ್ಯಕ್ರಮದ ಮಾಹಿತಿಯನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ಹೊಸ ಮತದಾರರ ನೋಂದಣಿ ಬಗ್ಗೆ ವಿವರಿಸಿದರು,

ಹಾಗೆಯೇ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜೊಯಿಡಾ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ನಾಯ್ಕ ರವರು ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದರ ಮೂಲಕ ಮುಂದೆ ಬರಬೇಕು, ಸಮಾಜದ ಅಂಕು ಡೊಂಕು ಗಳನ್ನು ತಿದ್ದಲು ಇಲ್ಲಿಂದಲೇ ಕಲಿಯಬೇಕು ಜೊತೆಗೆ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ 2028 ರ ವೇಳೆಗೆ ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸುವ ಗುರಿಯನ್ನು ಸಾಧಿಸಲು ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದಲ್ಲಿ ಯುವ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಂಜಲಿ ಅಶೋಕ ರಾಣೆ ಅವರು NCC ಯ ಮಹತ್ವದ ಬಗ್ಗೆ ತಿಳಿಸುತ್ತಾ ವಿವಿಧ ನೇಮಕಾತಿಗಳಲ್ಲಿ ಮೀಸಲಾತಿ ಪಡೆದುಕೊಳ್ಳಲು NCC ಸಹಕಾರಿಯಾಗಿದ್ದು ಈ ದಿಶೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಭಾಗವಹಿಸುವುದರ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು
ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಪಲ್ಲವಿ ಪ್ರಭುರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ರಾಘವೇಂದ್ರ ಅವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರೆ, ಎನ್.ಎಸ್.ಎಸ್. ಸಂಚಾಲಕರಾದ ಮಹಮದ್ ವಾಯಿಜ್, ವಂದಿಸಿದರು.