ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಿಡಾ ಗ್ರಾಮದ ವಾಗೇಲಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಬಸ್ ಚಾಲಕ ಹಾಗೂ ನಿರ್ವಾಹಕರ ಅನುಕೂಲಕ್ಕಾಗಿ ನಾಗೋಡಾ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ದಿವ್ಯಾ ದಯಾನಂದ ನಾಯ್ಕ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.

ಕರಂಜೋಯಿಡಾ ಗ್ರಾಮದ ಕಸಂಬಾ ನಿವಾಸಿಯಾಗಿರುವ ದಿವ್ಯ ದಯಾನಂದ ನಾಯ್ಕ ಅವರು, ವಾಗೇಲಿ ಭಾಗದಲ್ಲಿ ಬಸ್ ಸಂಚಾರ ನಡೆಸುವ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯದ ವೇಳೆ ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿ, ತಮ್ಮ ಸ್ವಂತ ವೆಚ್ಚದಲ್ಲಿ ಕೊಠಡಿ ನಿರ್ಮಿಸುವ ಮೂಲಕ ನೆರವಾಗಿದ್ದಾರೆ.
ದೂರದ ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ವಿಶ್ರಾಂತಿ ಪಡೆಯಲು ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಕೊಠಡಿಯನ್ನು ನಿರ್ಮಿಸಲಾಗಿದೆ. ತಮ್ಮ ವೈಯಕ್ತಿಕ ಖರ್ಚಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಅನುಕೂಲ ಕಲ್ಪಿಸಿರುವ ದಿವ್ಯಾ ದಯಾನಂದ ನಾಯ್ಕ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಸಾರ್ವಜನಿಕ ಸೇವೆ ಎಂದರೆ ಕೇವಲ ಅಧಿಕಾರ ಅಥವಾ ಹುದ್ದೆಯ ಮೂಲಕ ಮಾಡುವ ಕಾರ್ಯವಲ್ಲ, ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಸಮಾಜಕ್ಕೆ ನೆರವಾಗುವುದೂ ಸಾರ್ವಜನಿಕ ಸೇವೆಯೇ ಎಂಬುದಕ್ಕೆ ಈ ಕಾರ್ಯ ಉತ್ತಮ ಉದಾಹರಣೆಯಾಗಿದೆ.

ವಾಗೇಲಿ ಭಾಗದಲ್ಲಿ ಬಸ್ ಸೇವೆ ಸುಗಮವಾಗಿ ಮುಂದುವರಿಯಲು ಚಾಲಕರು ಹಾಗೂ ನಿರ್ವಾಹಕರಿಗೆ ಅಗತ್ಯವಾದ ವಿಶ್ರಾಂತಿ ಸೌಲಭ್ಯ ಕಲ್ಪಿಸಿರುವುದು ಪ್ರಯಾಣಿಕರಿಗೂ ಪರೋಕ್ಷವಾಗಿ ಅನುಕೂಲವಾಗಲಿದೆ. ದಿವ್ಯಾ ದಯಾನಂದ ನಾಯ್ಕ ಅವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.