Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಎಮ್ಮೆಗಳನ್ನು
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಅನಮೋಡ ಪ್ರದೇಶದಲ್ಲಿ ನಡೆದಿದೆ.

Banner Ad

ರಾಮನಗರದ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಐಷರ್ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಒಟ್ಟು 36 ಎಮ್ಮೆಗಳನ್ನು ರಕ್ಷಣೆ ಮಾಡಿ ಆರು ಮಂದಿಯನ್ನು ಬಂಧಿಸಲಾಗಿದೆ. ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಸ್ಥಳೀಯ ನಾಗರಿಕರು ಗಮನಿಸಿ ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಎಮ್ಮೆಗಳನ್ನು ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮೂರು ಐಷರ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಮಹಾರಾಷ್ಟ್ರದಿಂದ ಗೋವಾದ ಕಸಾಯಿಖಾನೆಗಳಿಗೆ ಅನಮೋಡ ಮಾರ್ಗವಾಗಿ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರತಿ ಐಷರ್ ವಾಹನದಲ್ಲಿ ತಲಾ 12 ಎಮ್ಮೆಗಳಂತೆ ಒಟ್ಟು 36 ಎಮ್ಮೆಗಳ ಸಾಗಿಸಲಾಗುತ್ತಿತ್ತು.

ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯದ ಮೂಲಕ ಗೋವಾಕ್ಕೆ ಎಮ್ಮೆಗಳನ್ನು ಸಾಗಿಸಲು ಅಗತ್ಯವಿರುವ ಕರ್ನಾಟಕ ರಾಜ್ಯ ಪರವಾನಗಿ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಅಕ್ರಮ ಪ್ರಾಣಿ ಸಾಗಣೆ ತಡೆ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ರಾಮನಗರ ತನಿಖೆ ಕೈಗೊಂಡಿದ್ದಾರೆ.

Banner Ad