ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಗ್ರಾಮಗಳಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳು ಹಾಗೂ ಹುತ್ತಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಗಳಿಗೆ ತೆರಳಿ ನಾಗದೇವರಿಗೆ ಹಾಲು, ಹಣ್ಣು, ಹೂವು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂತು.
ನಾಗರ ಪಂಚಮಿ ಪ್ರಯುಕ್ತ ಮನೆಗಳಲ್ಲಿಯೂ ಕೂಡ ಬೆಳ್ಳಿ, ಬಂಗಾರ ಮತ್ತು ಮಣ್ಣಿನ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹಬ್ಬದ ಸಾಂಪ್ರದಾಯಿಕ ಉಂಡಿ, ಸಿಹಿ ತಿಂಡಿಗಳು ಹಾಗೂ ವಿವಿಧ ತಿನಿಸುಗಳನ್ನು ತಯಾರಿಸಿ ಕುಟುಂಬಸ್ಥರು ಮತ್ತು ಬಂಧು-ಬಳಗದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳ ಸುತ್ತಮುತ್ತ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ವಿಶೇಷ ವಾತಾವರಣ ನಿರ್ಮಾಣವಾಗಿತ್ತು.
