ಸುದ್ದಿ ಕನ್ನಡ ವಾರ್ತೆ
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಬೆಳಗಾವಿ ಮೂಲದ ಗುರುಲಿಂಗಯ್ಯ (76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಇವರ ಕ್ರಿಯಾ ಸಮಾಧಿ ಇಂದು ಸಂಜೆ ಸ್ವಗ್ರಾಮ ಚಿಕ್ಕಬಾಗೇವಾಡಿಯಲ್ಲಿ ನಡೆಯಲಿದೆ.
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ಪವಿತ್ರ ಕೇದಾರನಾಥ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಹಿಮಾಲಯದ ಪುಣ್ಯಕ್ಷೇತ್ರದ ಸನ್ನಿಧಿಯಲ್ಲಿ ದಶಕಗಳ ಕಾಲ ಶಿವನ ಆರಾಧನೆ ಮಾಡಿದ್ದ ಶ್ರೇಷ್ಠ ಅರ್ಚಕರೊಬ್ಬರನ್ನು ಧಾರ್ಮಿಕ ಲೋಕ ಇಂದು ಕಳೆದುಕೊಂಡAತಾಗಿದೆ. ಅವರ ನಿಧನಕ್ಕೆ ದೇಶಾದ್ಯಂತ ಇರುವ ಅಪಾರ ಭಕ್ತವೃಂದ ತೀವ್ರ ಶೋಕ ವ್ಯಕ್ತಪಡಿಸಿದೆ.
ಗುರುಲಿಂಗಯ್ಯ ಯಾರು?
ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬವು ಕಳೆದ ಮೂರು ತಲೆಮಾರಿನಿಂದ ಉತ್ತರಾಖಂಡದಲ್ಲೇ ನೆಲೆಸಿದೆ. ಇವರು, ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಅರ್ಚಕರಾಗಿ ಸೇವೆಗೆ ಸೇರಿದ್ದರು. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ ಹಾಗೂ ಭಕ್ತಿಯಿಂದ ಸುದೀರ್ಘ ಸೇವೆ ಸಲ್ಲಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕೇದಾರನಾಥ ಪೀಠದ (ಹಿಮವತ್ ಕೇದಾರ ವೈರಾಗ್ಯ ಪೀಠ) ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತದ (ವಿಶೇಷವಾಗಿ ಕರ್ನಾಟಕದ) ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಇಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗುತ್ತಾರೆ. ಗುರುಲಿಂಗಯ್ಯ ಅವರು ಈ ಪವಿತ್ರ ಪರಂಪರೆಯನ್ನು ಮುನ್ನಡೆಸಿದವರಾಗಿದ್ದಾರೆ.
ಇಂದು ಸ್ವಗ್ರಾಮದಲ್ಲಿ ಕ್ರಿಯಾ ಸಮಾಧಿ
ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿAದ ಅವರ ಸ್ವಗ್ರಾಮವಾದ ಬೆಳಗಾವಿ ತಾಲ್ಲೂಕಿನ ಚಿಕ್ಕಬಾಗೇವಾಡಿಗೆ ತರಲಾಗಿದೆ. ಇಂದು ಸಂಜೆ 4 ಗಂಟೆಗೆ ಹಲವಾರು ಮಠಾಧೀಶರ ಸಮ್ಮುಖದಲ್ಲಿ, ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
