ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಳಿಯಾಳ-ಜೋಯಿಡಾ ಕ್ಷೇತ್ರದ ಶಾಸಕ ಆರ್. ವಿ. ದೇಶಪಾಂಡೆ ಅವರನ್ನು ಜೋಯಿಡಾ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಭೇಟಿಯಾಗಿ ಅಭಿನಂದಿಸಿ, ಗೌರವಿಸಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿರುವ ಆರ್. ವಿ. ದೇಶಪಾಂಡೆ ಅವರ ಹಳಿಯಾಳದ ನಿವಾಸದಲ್ಲಿ ಕಾರ್ಯಕರ್ತರು ಈ ಗೌರವ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಯುವ ಮುಖಂಡ ಅರುಣ್ ದೇಸಾಯಿ, “ಆರ್. ವಿ. ದೇಶಪಾಂಡೆ ಅವರು ನಮ್ಮ ತಾಲೂಕಿನ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಜೋಯಿಡಾ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನಗಳು ಸಿಗುವಂತಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂಜಯ್ ಹಣಬರ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಂಗೇಶ್ ಕಾಮತ್, ಪ್ರಮುಖರಾದ ಮಂಜುನಾಥ್ ಮೋಕಾಶಿ, ಅಕ್ಷಯ್ ರಾವಳ್, ಶ್ರೀಧರ್ ದಬ್ಗಾರ್, ಮಂಜುನಾಥ್ ಭಾಗ್ವತ್, ಪ್ರಕಾಶ್ ಮಿರಾಶಿ ಡಿಗ್ಗಿ, ಗಜಾನನ ದೇಸಾಯಿ, ಅಮರ ಭಾಗ್ವತ, ಸದಾನಂದ ಉಪಾಧ್ಯ,ಪ್ರಸನ್ನ ಗಾವಡಾ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.