ಸುದ್ಧಿಕನ್ನಡ ವಾರ್ತೆ
ಪಣಜಿ: ಪರ್ವರಿಯಿಂದ ಮಾಪ್ಸಾ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಪ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು ಸಪ್ಟೆಂಬರ್ 10 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಧ್ಘಾಟನೆ ನೆರವೇರಿಸಲಿದ್ದಾರೆ. ಪಣಜಿ-ಮಾಪ್ಸಾ ಹೆದ್ದಾರಿಯಲ್ಲಿ ಪ್ರತಿದಿನ ಸಂಭವಿಸುವ ಭಾರಿ ವಾಹನ ದಟ್ಟಣೆಯಿಂದ ಪ್ಲೈ ಓವರ್ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಇದೀಗ ಈ ಮಾರ್ಗದ ಪ್ರಯಾಣವು ಕೇವಲ 10 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ.
ಈ ಆರು ಪಥಗಳ ಐದೂವರೆ ಕಿಮಿ ಉದ್ಧದ ಎತ್ತರದ ಕಾರಿಡಾರ್ ಯೋಜನೆ ಕಾಮಗಾರಿಯನ್ನು ಸಪ್ಟೆಂಬರ್ 2024 ರಲ್ಲಿ ಪ್ರಾರಂಭಿಸಲಾಗಿತ್ತು. 450 ಕೋಟಿ ರೂ ವೆಚ್ಛದ ಈ ಯೋಜನೆಯನ್ನು ಆರ್ ಆರ್ ಎಸ್ ಎಂ ಇನ್ಫ್ರಾ ಕಂಪನಿಯು ಡಿಸೆಂಬರ್ 2025 ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿತ್ತು. ಆದರೆ ಈ ಮಾರ್ಗದ ನಿರಂತರ ವಾಹನ ಸಂಚಾರ ಬದಲಾವಣೆ ಮತ್ತು ಕೆಲ ತಾಂತ್ರಿಕ ಸವಾಲುಗಳಿಂದಾಗಿ ಕಾಮಗಾರಿ ವೇಗದಲ್ಲಿ ಕೊಂಚ ವಿಳಂಭವಾಗಿದ್ದರೂ ಕೇವಲ 2 ವರ್ಷಗಳಲ್ಲಿ ಈ ಈ ಬೃಹತ್ ಯೋಜನೆ ಪೂರ್ಣಗೊಂಡಂತಾಗಿದೆ. ಇದೀಗ ಗಣೇಶ ಚತುರ್ಥಿಯ ಎರಡು ದಿನ ಮುಂಚಿತವಾಗಿ ಈ 6 ವೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಇದರಿಂದಾಗಿ ಹಬ್ಬದ ಸಂದರ್ಭದ ವಾಹನ ದಟ್ಟಣೆಯಿಂದ ಜನತೆಗೆ ಪರಿಹಾರ ಸಿಕ್ಕಂತಾಗಿದೆ.
ರಾಜ್ಯ ಲೊಕೋಪಯೋಗಿ ಸಚಿವ ದಿಗಂಬರ್ ಕಾಮತ್ ರವರು ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರವರನ್ನು ಭೇಟಿ ಮಾಡಿ ಈ ಮೇಲ್ಸೇತುವೆಯ ಉಧ್ಘಾಟನೆ ದಿನಾಂಕವನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯಕ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ಉಪಸ್ಥಿತರಿದ್ದರು.
ಈ ಮಾರ್ಗವು ಮುಂಬಯಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಈ ಮಾರ್ಗದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸುತ್ತವೆ. ಇದರಿಂದಾಗಿ ಪರ್ವರಿ ಭಾಗದಲ್ಲಿ ಭಾರಿ ವಾಹನ ದಟ್ಟಣೆಯುಂಟಾಗುತ್ತಿತ್ತು. ಆದರೆ ಈ ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಮಾರ್ಗದಲ್ಲಿ ಓಡಾಟ ನಡೆಸುವ ಜನರ ಸಮಸ್ಯೆಗೆ ಪರಿಹಾರ ಲಭಿಸಿದಂತಾಗಿದೆ.
